
ಪುತ್ತೂರು; ಪುತ್ತೂರಿನ ರಾಜಕೀಯದ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಶಾಸಕರೊಬ್ಬರು ತಮ್ಮನ್ನು ಭೇಟಿ ಮಾಡಲು ಬರುವ ಜನರಿಗೆ ಗಂಜಿ ಊಟದ ವ್ಯವಸ್ಥೆ ಮಾಡಿದ್ದಾರೆ. ಪ್ರತೀ ಸೋಮವಾರ ಶಾಸಕ ಅಶೋಕ್ ರೈ ಅವರ ಕಚೇರಿ ಜನಜಂಗುಳಿಯಿಂದ ಗಿಜಿಗುಟ್ಟುತ್ತಿರುತ್ತದೆ. ಬೆಳಿಗ್ಗೆ ಬಂದ ಜನರ ಸಂಜೆ ತನಕವೂ ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಬಡವರ್ಗದ ಮಂದಿ ಊಟ ಇಲ್ಲದೆ ಪದಾಡುವ ಸ್ಥಿತಿಯನ್ನು ತಪ್ಪಿಸಲು ಹಸಿದ ಹೊಟ್ಟೆಗೆ ಅನ್ನ ನೀಡುವ ಕಾಯಕವನ್ನು ಇದೀಗ ಶಾಸಕರು ಆರಂಭಿಸಿದ್ದಾರೆ.
ವಾರದ ಪ್ರತೀ ಸೋಮವಾರ ಪುತ್ತೂರು ಶಾಸಕ ಕಚೇರಿಯಲ್ಲಿ ಜನಸ್ಪಂಧನ ಕಾರ್ಯಕ್ರಮ ನಡೆಯುತ್ತದೆ. ಸೋಮವಾರ ಜನಸ್ಪಂದನೆಗಾಗಿಯೇ ಶಾಸಕರು ಮೀಸಲಿಟ್ಟ ದಿನ. ಕಡಿಮೆ ಎಂದರೂ ೫೦೦ರಿಂದ ೬೦೦ ಮಂದಿಯನ್ನು ಶಾಸಕರು ಮಾತನಾಡಿಸುತ್ತಾರೆ. ಅವರ ನೋವುಗಳನ್ನು ಆಲಿಸುತ್ತಾರೆ. ಪರಿಹಾರ ನೀಡುತ್ತಾರೆ. ಇದು ನಡೆದುಕೊಂಡು ಬಂದ ಈ ಮೂರು ವರ್ಷಗಳ ಪದ್ಧತಿ. ಅಷ್ಟು ಮಂದಿಯನ್ನೂ ತಾವೇ ಮಾತನಾಡಿಸುವ ಕಾರಣ ತುಂಬಾ ಮಂದಿಗೆ ಮಧ್ಯಾಹ್ನದ ಊಟವೂ ಇರುತ್ತಿರಲಿಲ್ಲ. ಇದನ್ನು ಗಮನಿಸಿದ ಶಾಸಕರು ಈ ವಾರದಿಂದಲೇ ಪ್ರತೀ ಸೋಮವಾರ ಜನಸ್ಪಂಧನೆಗೆ ಬರುವ ಮಂದಿಗೆ ಗಂಜಿ ಊಟದ ವ್ಯವಸ್ಥೆ ಮಾಡಿದ್ದಾರೆ.
ಚಿಕ್ಕಿ ಜತೆಗೆ ಗಂಜಿ ಊಟ ಬಂತು..
ತನ್ನ ವಿಭಿನ್ನ ಚಿಂತನೆಯಿಂದ ಶಾಸಕ ಅಶೋಕ್ ರೈ ಪ್ರತೀ ಹಂತದಲ್ಲೂ ಗಮನ ಸೆಳೆಯುತ್ತಾರೆ. ಶಾಸಕರನ್ನು ಭೇಟಿಯಾಗಲು ಬರುವ ಮಂದಿಗೆ ಚಿಕ್ಕಿ ಕೊಡಲು ಆರಂಭಿಸಿದ್ದರು. ಕಳೆದ ೩ ವರ್ಷಗಳಿಂದಲೂ ಸೋಮವಾರ ಅರ್ಜಿ ಹಿಡಿದು, ಸಮಸ್ಯೆ ಹಿಡಿದು ಬರುವ ಜನರಿಗೆ ಚಿಕ್ಕಿ ಕೊಟ್ಟು ಮಾತನಾಡಿಸುತ್ತಿದ್ದರು. ಸ್ವಲ್ಪ ಸಮಯದ ಬಳಿಕ ಚಿಕ್ಕಿ ಬದಲಿಗೆ ಮಜ್ಜಿಗೆ ಕೊಡಲು ಆರಂಭಿಸಿದರು. ಆದರೆ ಇದ್ಯಾವುದೂ ಹಸಿವನ್ನು ತಣಿಸುವುದಿಲ್ಲ ಎಂಬ ಹಿನ್ನಲೆಯಲ್ಲಿ ಇನ್ನು ಮುಂದೆ ಚಟ್ನಿ,ಪಲ್ಯ, ಉಪ್ಪಿನಕಾಯಿ ಜತೆಗೆ ಗಂಜಿ ಊಟ ತಯಾರಿಸಿ ನೀಡಲು ಮುಂದಾಗಿದ್ದಾರೆ. ಶಾಸಕರ ಕಚೇರಿಯ ಹೊರಭಾಗದಲ್ಲಿ ಗಂಜಿ ತಯಾರಿಗೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಜನರು ಕುಳಿತು ಊಟ ಮಾಡುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.


























