Home ಸುದ್ದಿ ರಾಷ್ಟ್ರೀಯ ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರತ-ಇಸ್ರೇಲ್ ಶಾಕ್: ಬೆಲಾರಸ್ ನಿರ್ಣಯದ ವಿರುದ್ಧ ಮತದಾನ

ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರತ-ಇಸ್ರೇಲ್ ಶಾಕ್: ಬೆಲಾರಸ್ ನಿರ್ಣಯದ ವಿರುದ್ಧ ಮತದಾನ

ವಿಶ್ವಸಂಸ್ಥೆ, ನ.3- ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಮತ್ತು ಇಸ್ರೇಲ್ ಭಾರಿ ಆಘಾತ ನೀಡಿವೆ. ಪ್ರಾದೇಶಿಕ ಹಾಗೂ ಉಪಪ್ರಾದೇಶಿಕ ಮಟ್ಟದಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಬೆಲಾರಸ್ ಮಂಡಿಸಿದ್ದ ನಿರ್ಣಯದ ವಿರುದ್ಧ ಭಾರತ ಮತ್ತು ಇಸ್ರೇಲ್ ಮತ ಚಲಾಯಿಸಿವೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೊದಲ ಸಮಿತಿಯಲ್ಲಿ ಸೋಮವಾರ ಈ ನಿರ್ಣಯದ ಕುರಿತು ಮತದಾನ ನಡೆಯಿತು. ಒಟ್ಟು 193 ಸದಸ್ಯ ರಾಷ್ಟ್ರಗಳ ಪೈಕಿ 180 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, ಭಾರತ ಮತ್ತು ಇಸ್ರೇಲ್ ಮಾತ್ರ ವಿರುದ್ಧವಾಗಿ ಮತ ಹಾಕಿದವು. ಯಾವುದೇ ದೇಶ ಮತದಾನದಿಂದ ದೂರ ಉಳಿದಿರಲಿಲ್ಲ.


ಭಾರತದ ವಿರೋಧಕ್ಕೆ ಕಾರಣವೇನು?
ಪಾಕಿಸ್ತಾನ ಮತ್ತು ಬೆಲಾರಸ್ ಮಂಡಿಸಿದ್ದ ಈ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ ಭಾರತ, ಶಸ್ತ್ರಾಸ್ತ್ರ ನಿಯಂತ್ರಣ ಎನ್ನುವುದು ಕೇವಲ ಪ್ರಾದೇಶಿಕ ಅಥವಾ ಉಪಪ್ರಾದೇಶಿಕ ಸಮಸ್ಯೆಯಲ್ಲ, ಅದೊಂದು ಜಾಗತಿಕ ವಿಚಾರ ಎಂದು ಸ್ಪಷ್ಟಪಡಿಸಿದೆ.
ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಕಚೇರಿಯ ಪ್ರಥಮ ಕಾರ್ಯದರ್ಶಿ ಅನ್ಮೋಲ್ ಶೇರ್ ಬೇಡಿ ಅವರು ಭಾರತದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಮುಖ್ಯವಾಗಿ ಪ್ರಾದೇಶಿಕ ಮತ್ತು ಉಪಪ್ರಾದೇಶಿಕ ವ್ಯಾಪ್ತಿಯಲ್ಲಿ ಮಾತ್ರ ನಿರ್ವಹಿಸಬೇಕು ಎಂಬ ಪ್ರಸ್ತಾವನೆಯನ್ನು ಭಾರತ ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.


ದೇಶಗಳ ಭದ್ರತಾ ಕಾಳಜಿಗಳನ್ನು ಕೇವಲ ಪ್ರಾದೇಶಿಕ ಗಡಿಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂಬುದು ಭಾರತದ ಪ್ರಮುಖ ವಾದವಾಗಿದೆ.
ನಿರ್ಣಯದಲ್ಲಿ ವಿಶ್ವಸಂಸ್ಥೆಯ ನಿಶಸ್ತ್ರೀಕರಣ ಆಯೋಗವು ಪ್ರಾದೇಶಿಕ ಶಸ್ತ್ರಾಸ್ತ್ರ ನಿಯಂತ್ರಣಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಮಾರ್ಗಸೂಚಿ ರೂಪಿಸುವಂತೆ ಪ್ರಸ್ತಾಪಿಸಲಾಗಿತ್ತು.
ಆದರೆ ಈ ಪ್ರಸ್ತಾಪದ ಬಗ್ಗೆಯೂ ಭಾರತ ಪ್ರಶ್ನೆ ಎತ್ತಿದೆ.


1993ರಲ್ಲಿ ಪ್ರಾದೇಶಿಕ ನಿಶಸ್ತ್ರೀಕರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು, 1999ರಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ನಿಶಸ್ತ್ರೀಕರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು ಹಾಗೂ 2017ರಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಕ್ಷೇತ್ರದಲ್ಲಿ ವಿಶ್ವಾಸ ವೃದ್ಧಿಸುವ ಕ್ರಮಗಳ ಕುರಿತು ಶಿಫಾರಸುಗಳನ್ನು ಈಗಾಗಲೇ ಆಯೋಗ ಒಮ್ಮತದಿಂದ ಅಂಗೀಕರಿಸಿದೆ ಎಂದು ಭಾರತ ನೆನಪಿಸಿದೆ.