Home ಜಿಲ್ಲೆ ಮೈಸೂರು ಭ್ರೂಣಲಿಂಗ ಹತ್ಯೆಗೆ ನನ್ನ ವಿರೋಧವಿದೆ: ಮಂಜು ಸ್ಪಷ್ಟನೆ

ಭ್ರೂಣಲಿಂಗ ಹತ್ಯೆಗೆ ನನ್ನ ವಿರೋಧವಿದೆ: ಮಂಜು ಸ್ಪಷ್ಟನೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.09:
ತಾಲೂಕಿನ ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ನಡೆದಿದೆ ಎನ್ನಲಾದ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆಗೆ ಯಾವುದೇ ಕಾರಣಕ್ಕೂ ನನ್ನ ಸಹಕಾರವಿಲ್ಲ ಶಾಸಕ ಹೆಚ್.ಟಿ.ಮಂಜು ಸ್ಪಷ್ಟನೆ ನೀಡಿದ್ದಾರೆ.


ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕರು ಕೆ.ಆರ್.ಪೇಟೆ ಪಟ್ಟಣದ ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ನಡೆಯುತ್ತಿತ್ತು ಎಂದು ಹೇಳಲಾದ ಭ್ರೂಣಲಿಂಗ ಪತ್ತೆ ಕುರಿತ ನನ್ನ ಮಾತುಗಳನ್ನು ಕೆಲವು ಮಾಧ್ಯಮಗಳು ಮತ್ತು ವ್ಯಕ್ತಿಗಳು ಸರಿಯಾಗಿ ಅರ್ಥೈಸಿಕೊಳ್ಳದೆ ನನ್ನ ವಿರುದ್ದ ಅಪಪ್ರಚಾರ ನಡೆಸುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಯಾವುದೇ ಅಪ್ರಾಪ್ತರು ಭ್ರೂಣ ಹತ್ಯೆಗೆ ಒಳಗಾಗಿಲ್ಲ. ಹೊರಗಿನ ಕೆಲವು ಪ್ರಕರಣಗಳು ಪಟ್ಟಣದ ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಪತ್ತೆಯಾಗಿವೆ ಎಂದು ಹೇಳಲಾಗಿದೆ. ಭ್ರೂಣ ಹತ್ಯೆ ಪತ್ತೆ ಕೇಸ್ ರಾಜ್ಯದಾದ್ಯಂತ ಸುದ್ದಿಯಾದ ಕಾರಣ ನನ್ನ ತಾಲೂಕಿನ ಗೌರವಾನ್ವಿತ ಹೆಣ್ಣು ಮಕ್ಕಳ ಘನತೆಗೆ ಕುಂದಾಗಿದೆ. ಹೊರಗಿನ ನನ್ನ ಕೆಲವು ಶಾಸಕ ಮಿತ್ರರೂ ಈ ಕುರಿತು ನನ್ನ ಬಳಿ ಪ್ರಸ್ತಾಪಿಸಿದ್ದಾರೆ. ನಮ್ಮ ತಾಲೂಕಿನ ಯಾವುದೇ ಹೆಣ್ಣು ಭ್ರೂಣ ಹತ್ಯೆ ಮಾಡಿಸಿಕೊಂಡಿಲ್ಲ ಎಂದು ಅವರೆಲ್ಲರಿಗೂ ವಿವರಸಿದ್ದೇನೆ. ಪ್ರಕರಣ ಬಯಲಿಗೆ ಬಂದ ತಕ್ಷಣ ನನ್ನ ತಾಲೂಕಿನ ಘನತೆ ಗೌರವಗಳಿಗೆ ಕುಂದಾಗಬಾರದು ಎನ್ನುವ ಉದ್ದೇಶದಿಂದ ನಾನು ಸದರಿ ವಿಚಾರದ ಬಗ್ಗೆ ಮಾತನಾಡಿದ್ದೇನೆ ಎಂದಿರುವ ಶಾಸಕರು ಭ್ರೂಣಹತ್ಯೆಗೆ ನನ್ನ ವಿರೋಧವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.


ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರವಿದೆ. ಆದರೆ ಅದನ್ನು ಬಳಕೆ ಮಾಡುವ ನುರಿತ ವೈದ್ಯರಿಲ್ಲ. ಸ್ಕ್ಯಾನಿಂಗ್ ಯಂತ್ರ ನೀಡಿದ ಸರ್ಕಾರ ಮರುಕ್ಷಣವೇ ಅದನ್ನು ಬಳಕೆ ಮಾಡುವ ನುರಿತ ವೈದ್ಯರನ್ನು ನೇಮಕ ಮಾಡಬೇಕಾಗಿತ್ತು. ಸ್ಕ್ಯಾನಿಂಗ್ ತಜ್ಞರಿಲ್ಲದ ಕಾರಣ ಸರ್ಕಾರಿ ವೈದ್ಯರು ತಮ್ಮ ಬಳಿಗೆ ಬಂದ ಗರ್ಭಿಣಿ ಮಹಿಳೆಯರ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆ ಕುರಿತ ಸ್ಥಿತಿಗತಿಗಳನ್ನು ಅರಿತು ಉತ್ತಮ ಚಿಕಿತ್ಸೆ ನೀಡಲು ಸ್ಕ್ಯಾನಿಂಗ್ ಮಾಡಿಸಲು ತಿಳಿಸುತ್ತಾರೆ. ಸ್ಕ್ಯಾನಿಂಗ್ ಮಾಡಿಸಲು ಗರ್ಭಿಣಿಯರು ದೂರದ ಮೈಸೂರು, ಹಾಸನ ಮುಂತಾದ ಕಡೆಗೆ ಹೋಗುವ ಬದಲು ಸ್ಥಳೀಯ ಸ್ಕ್ಯಾನಿಂಗ್ ಕೇಂದ್ರಗಳಿಗೆ ಹೋಗುತ್ತಾರೆ. ಹೊರಗೆ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರಲು ಸರ್ಕಾರಿ ವೈದ್ಯರು ಚೀಟಿ ಬರೆದಿರುವುದನ್ನೆ ಅಪರಾದ ಎಂದು ಪರಿಗಣಿಸಿ ವೈದ್ಯರ ಮೇಲೆ ಕ್ರಮಕ್ಕೆ ಮುಂದಾಗಿರುವುದರ ಬಗ್ಗೆ ನಾನು ಮಾತನಾಡಿದ್ದೇನೆ. ವೈದ್ಯರು ಹೊರಗಿನ ಸ್ಕ್ಯಾನಿಂಗ್ ಕೇಂದ್ರಗಳಿಗೆ ಪೇಷಂಟ್ ಗಳನ್ನು ಕಳುಹಿಸಿದ್ದರ ಹಿಂದೆ ರಾಜ್ಯ ಸರ್ಕಾರದ ಆಡಳಿತ ವೈಪಲ್ಯವಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನುರಿತ ಸ್ಕ್ಯಾನಿಂಗ್ ತಜ್ಞರನ್ನು ನೇಮಕ ಮಾಡುವಂತೆ ನಾನು ಹತ್ತು ಹಲವು ಬಾರಿ ರಾಜ್ಯ ಆರೋಗ್ಯ ಸಚಿವರಿಗೆ ಮತ್ತು ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಮುಂದೆ ಒತ್ತಡ ಹಾಕಿದ್ದೇನೆ.

ಆದರೂ ನಮ್ಮ ಬೆಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಅಗತ್ಯ ವೈದ್ಯಕೀಯ ಸಿಬ್ಬಂಧಿಗಳನ್ನು ನೇಮಕ ಮಾಡಿದರೆ ಸರ್ಕಾರಿ ವೈದ್ಯರ ಮೇಲಿನ ಒತ್ತಡ ತಪ್ಪುತ್ತದೆ. ನಮ್ಮ ತಾಲ್ಲೂಕಿನ ಕೆಲವು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದರಿಂದ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡಿದರೆ ವೈದ್ಯರು ನಮ್ಮ ತಾಲ್ಲೂಕಿಗೆ ಬರಲು ಹಿಂಜರಿಯುತ್ತಾರೆ ಎಂಬ ದೃಷ್ಟಿಯಿಂದ ನಾನು ಹೇಳಿದ್ದೇನೆ. ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆಯಂತಹ ಪ್ರಕರಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪಾರದರ್ಶಕ ತನಿಖೆ ನಡೆಸಲಿ ಎಂದ ಶಾಸಕ ಹೆಚ್.ಟಿ.ಮಂಜು ತನಿಖೆಯ ಸಂದರ್ಭದಲ್ಲಿ ಸರ್ಕಾರಿ ವೈದ್ಯರು ಹೊರಗಿನ ಸ್ಕ್ಯಾನಿಂಗ್ ಕೇಂದ್ರಗಳಿಗೆ ಚೀಟಿ ಬರೆಯಲು ಕಾರಣವಾದ ಅಂಶಗಳನ್ನೂ ಪರಿಗಣಿಸಬೇಕು. ಅಗತ್ಯ ವೈದ್ಯಕೀಯ ಸಿಬ್ಬಂಧಿಗಳನ್ನು ನೇಮಕ ಮಾಡಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ಮೇಲಿನ ಕಾರ್ಯ ಒತ್ತಡವನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.
ನನ್ನ ವಿರುದ್ದ ಕೆಲವರು ಸಕ್ರಿಯ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ. ನಾನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಬರುವ ಕಾಮೆಂಟ್ಸ್ ಗೆ ಉತ್ತರ ಕೊಡುವುದಕ್ಕೆ ಹೋಗುವುದಿಲ್ಲ ಅಥವಾ ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದ ಶಾಸಕರು ಟೀಕೆಗಳು ಸಾಯುತ್ತವೆ. ನಾವು ಮಾಡುವ ಕೆಲಸಗಳು ಉಳಿಯುತ್ತವೆ ಎಂದರು.