Home ಜಿಲ್ಲೆ ಮೈಸೂರು ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಪೂರ್ವಭಾವಿ ಸಭೆ

ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಪೂರ್ವಭಾವಿ ಸಭೆ

ಸಂಜೆವಾಣಿ ವಾರ್ತೆ
ತಿ.ನರಸೀಪುರ:ಏ.10:-
ವೀರಶೈವ ಲಿಂಗಾಯತ ಮಹಾಸಭಾದ ಸಹಭಾಗಿತ್ವದಲ್ಲಿ ತಾಲೂಕು ಆಡಳಿತದ ವತಿಯಿಂದ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಗುರುವಾರ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.


ಜಯಂತಿ ಆಚರಣೆಯ ಪೂರ್ವಸಿದ್ಧತೆಗೆ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಏ.20 ರಂದು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬಸವ ತತ್ವ ವಿಚಾರವನ್ನು ಮಂಡಿಸುವ ವಾಗ್ಮಿಯೊಬ್ಬರನ್ನು ಆಹ್ವಾನಿಸಿ, ಐವರು ಸಾಧಕರನ್ನು ಸನ್ಮಾನಿಸುವ ಮೂಲಕ ಶಿಷ್ಟಾಚಾರದಂತೆ ನಾಡಿನ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರ ಜಯಂತಿಯನ್ನು ಆಯೋಜಿಸಲು ತೀರ್ಮಾನಿಸಲಾಯಿತು.
ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ರಾಜ್ಯ ಸರ್ಕಾರ ತಾಲೂಕು ಮಟ್ಟದ ಜಯಂತಿ ಆಚರಣೆಗೆ ಯಾವುದೇ ಅನುದಾನ ನೀಡದಿರುವುದಕ್ಕೆ ಸಭೆಯ ಆರಂಭದಲ್ಲಿ ಹಲವರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಮಹಾಸಭಾ ಪ್ರಧಾನ ಕಾರ್ಯದರ್ಶಿ ಕೆ.ವಿ.ಶಿವಶಂಕರ್ ಕಳೆದ ಬಾರಿ ನಾವೇ ಖರ್ಚು ವೆಚ್ಚಗಳನ್ನು ಮಾಡಿದ್ದೇವು. ಕೆ ಇ ಬಿ ಗುತ್ತಿಗೆದಾರ ಸೋಮು ಹಾಗೂ ಬಜ್ಜಿ ನಿಂಗಪ್ಪ ಅವರು ಅನುದಾನ ಇಲ್ಲವೆಂದ ಮೇಲೆ ತಾಲೂಕು ಆಡಳಿತದಿಂದ ಜಯಂತಿ ಆಚರಣೆಯೇ ಬೇಡವೆಂದು ಅಸಮಾಧಾನ ವ್ಯಕ್ತಪಡಿಸಿದರು.


ಮಹಾಸಭಾದ ಹಿರಿಯ ಉಪಾಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ ಮಾತನಾಡಿ, ಜಾಗತಿಕ ಕಾಲಘಟ್ಟದಲ್ಲಿ ಯುವ ಜನತೆಗೆ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಬಸವಣ್ಣ ಅವರನ್ನು ಅರ್ಥೈಸುವ ಕಾರ್ಯವಾಗಬೇಕು. ಹಾಗಾಗಿ ಜಯಂತಿಯನ್ನು ತಾಲೂಕು ಆಡಳಿತದ ವತಿಯಿಂದ ಅಚ್ಚುಕಟ್ಟಾಗಿ ಆಚರಣೆ ಮಾಡಬೇಕು ಎಂದು ತಿಳಿಸಿದರು.


ತಹಸೀಲ್ದಾರ್ ಟಿ.ಜಿ. ಸುರೇಶಾ ಚಾರ್ ಮಾತನಾಡಿ, ಸಾಂಪ್ರದಾಯಿಕವಾಗಿ ಬಸವ ಜಯಂತಿಯನ್ನು ಆಚರಿಸಲು ತಾಲೂಕು ಆಡಳಿತ ಬದ್ಧವಾಗಿದೆ. ಸರ್ಕಾರ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ನೀಡುವ ಅನುದಾನದಲ್ಲಿಯೇ ಖರ್ಚು ವೆಚ್ಚಗಳನ್ನು ಸರಿದೂಗಿಸುತ್ತಿದ್ದೇವೆ. ಸಮುದಾಯ ಸಹಕಾರ ನೀಡಿದ್ದಲ್ಲಿ ವಿಜೃಂಭಣೆಯ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ. ಸಚಿವರ ಸೂಚನೆಯಂತೆ ಪುರಸಭೆ ವ್ಯಾಪ್ತಿಯಲ್ಲಿ ಬಸವ ಭವನ ನಿರ್ಮಾಣಕ್ಕೆ ನಿವೇಶನ ಕಲ್ಪಿಸಲು ಸ್ಥಳವೊಂದನ್ನು ಆಯ್ಕೆ ಮಾಡಿದ್ದೇವೆ. ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ನಿವೇಶನ ಯಾವುದು ಎಂಬುದನ್ನು ಖಚಿತ ಪಡಿಸಲಾಗುವುದು ಎಂದು ತಿಳಿಸಿದರು.


ವೀರಶೈವ ಲಿಂಗಾಯತ ಮಹಾಸಭಾಧ್ಯಕ್ಷ ಸಿ.ಎಂ.ಪ್ರಕಾಶ್ ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರಪ್ಪ ಮಾತನಾಡಿದರು. ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ರಂಗಸ್ವಾಮಿ, ಬನ್ನೂರು ಪುರಸಭೆ ಮುಖ್ಯಾಧಿಕಾರಿ ಕೆ.ಸತೀಶ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಿರಿಯೂರು ವೀರೇಂದ್ರ (ನವೀನ್ ), ಉಪಾಧ್ಯಕ್ಷರಾದ ಎಸ್.ಕೆ. ಕಿರಣ್, ಬಿ.ಎಂ. ಶಿವಮಲ್ಲಪ್ಪ, ಕೋಶಾಧ್ಯಕ್ಷ ದೊಡ್ಡನಹುಂಡಿ ನಂಜುಂಡಸ್ವಾಮಿ, ರಾಜ್ಯ ಸಮಿತಿ ಸದಸ್ಯ ಎನ್.ಲೋಕೇಶ್, ಕಾರ್ಯದರ್ಶಿ ಹಲವಾರ ಪರಮೇಶ್ ಪಟೇಲ್, ನಿರ್ದೇಶಕ ಪರಶಿವಮೂರ್ತಿ, ಕೆ.ಎಂ.ಮಲ್ಲು, ತೊಂಟೆಶ್, ಯುವ ಘಟಕದ ಅಧ್ಯಕ್ಷ ಕೆ.ಎನ್.ಅಶೋಕ್, ಮುಖಂಡರಾದ ಕಿರಗಸೂರು ಶಂಕರ್, ಪ್ರಸಾದ್ ನಾಯಕ್, ಸಿ.ಪುಟ್ಟಮಲ್ಲಯ್ಯ, ಅಧಿಕಾರಿಗಳಾದ ಡಾ. ರವಿಕುಮಾರ್, ಶಾಂತ, ಕೆ. ವಿ.ವೀರೇಶ್, ಬಿ ಆರ್ ಸಿ ನಾಗೇಶ್, ಪುಟ್ಟಸ್ವಾಮಿ, ಆರ್ ಐ.ಅಶೋಕ್ ಹಾಗೂ ಇತರರು ಇದ್ದರು.