
ಕೋಲ್ಕತಾ.ಮೇ21: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ (144) ವಿಧಾನಸಭಾ ಕ್ಷೇತ್ರಕ್ಕೆ ಇಂದು (ಗುರುವಾರ) ಬಿಗಿ ಭದ್ರತೆಯ ನಡುವೆ ಮರುಮತದಾನ ಪ್ರಗತಿಯಲ್ಲಿದ್ದು ಬಿರುಸಿನ ಮತದಾನ ದಾಖಲಾಗಿದೆ.
ಕಳೆದ ಏಪ್ರಿಲ್ 29 ರಂದು ನಡೆದಿದ್ದ ಎರಡನೇ ಹಂತದ ಚುನಾವಣೆಯ ವೇಳೆ ಇಲ್ಲಿ ವ್ಯಾಪಕ ಅಕ್ರಮಗಳು ನಡೆದ ಹಿನ್ನೆಲೆಯಲಿ, ಚುನಾವಣಾ ಆಯೋಗವು ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲೂ ಸಂಪೂರ್ಣ ಮರುಮತದಾನಕ್ಕೆ ಆದೇಶಿಸಿತ್ತು. ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿರುವ ಮತದಾನ ಸಂಜೆ 6 ಗಂಟೆಯವರೆಗೆ ಮುಂದುವರಿಯಲಿದೆ.
ಬಿಗಿ ಭದ್ರತೆ, ದ್ವಿಗುಣಗೊಂಡ ಸೈನ್ಯ: ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಚುನಾವಣಾ ಆಯೋಗವು ಅಭೂತಪೂರ್ವ ರಕ್ಷಣಾ ವ್ಯವಸ್ಥೆ ಮಾಡಿದೆ. ಒಟ್ಟು 35 ಕಂಪನಿಗಳಷ್ಟು ಕೇಂದ್ರ ಸಶಸ್ತ್ರ ಪೆÇಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಇದು ಮೊದಲ ಬಾರಿಗೆ ನಡೆದ ಮತದಾನದ ದಿನದ ಭದ್ರತೆಗಿಂತ ದುಪ್ಪಟ್ಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣದಿಂದ ಓಡಿದರೇ ಟಿಎಂಸಿ ಅಭ್ಯರ್ಥಿ: ಚುನಾವಣೆಯ ಕಣ ಕುತೂಹಲಕಾರಿ ತಿರುವು ಪಡೆದುಕೊಂಡಿದ್ದು, ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಜಹಾಂಗೀರ್ ಖಾನ್ ಅವರು ಕಳೆದ ಮಂಗಳವಾರ ತಾವು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದರು. ಇದು ಅವರ ವೈಯಕ್ತಿಕ ನಿರ್ಧಾರ ಎಂದು ಟಿಎಂಸಿ ಸಮರ್ಥಿಸಿಕೊಂಡಿದೆ. ಆದರೆ ಈ ಬಗ್ಗೆ ಲೇವಡಿ ಮಾಡಿರುವ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ಟಿಎಂಸಿ ಅಭ್ಯರ್ಥಿಗೆ ಮತಗಟ್ಟೆ ಏಜೆಂಟರೇ ಸಿಗದ ಕಾರಣ ಅವರು ರಣರಂಗದಿಂದ ಓಡಿಹೋಗಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ. ಸದ್ಯ ಇಲ್ಲಿ ಬಿಜೆಪಿ ಪರವಾಗಿ ದೇಬಾಂಶು ಪಾಂಡಾ ಕಣದಲ್ಲಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ನಡೆಗೆ ಆಕ್ಷೇಪ: ಫಾಲ್ಟಾ ಕ್ಷೇತ್ರವು ಟಿಎಂಸಿ ಪ್ರಭಾವಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಡೈಮಂಡ್ ಹಾರ್ಬರ್ ಲೋಕಸಭಾ ವ್ಯಾಪ್ತಿಗೆ ಬರುತ್ತದೆ. ಇತ್ತೀಚಿನ ಚುನಾವಣಾ ಹಿನ್ನಡೆಯ ಬಳಿಕ ಅಭಿಷೇಕ್ ಬ್ಯಾನರ್ಜಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿರುವುದು ಮತ್ತು ಪ್ರಚಾರದಿಂದ ದೂರ ಉಳಿದಿರುವುದು ಪಕ್ಷದ ಒಳಗಡೆ ಅಸಮಾಧಾನಕ್ಕೆ ಕಾರಣವಾಗಿದ್ದು, ಹಲವು ಶಾಸಕರು ಅವರ ನಡೆಯನ್ನು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದಾರೆ ಎನ್ನಲಾಗಿದೆ.
ಹೆದರಿಕೆಯ ದಿನಗಳು ಮುಗಿದವು: ಮತದಾರರ ಹರ್ಷ: “ಸುಮಾರು 15 ವರ್ಷಗಳ ಹಿಂದೆ ನಾವು ಮತದಾನ ಮಾಡಲು ಹೆದರುತ್ತಿದ್ದೆವು. ಗೂಂಡಾಗಳು ನಮ್ಮನ್ನು ಬೂತ್ ಒಳಗೆ ಬಿಡುತ್ತಿರಲಿಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ, ನಾವು ಯಾವುದೇ ಭಯವಿಲ್ಲದೆ ಬಂದು ಹಕ್ಕು ಚಲಾಯಿಸುತ್ತಿದ್ದೇವೆ,” ಎಂದು ಮತಗಟ್ಟೆಯಲ್ಲಿದ್ದ ಹಿರಿಯ ಮತದಾರರೊಬ್ಬರು ಹಳೆಯ ದಿನಗಳನ್ನು ನೆನೆದು ಸಂತಸ ಹಂಚಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗಷ್ಟೇ ಭರ್ಜರಿ ಜಯಗಳಿಸಿರುವ ಬಿಜೆಪಿ 207 ಸ್ಥಾನಗಳೊಂದಿಗೆ ಮೊದಲ ಬಾರಿಗೆ ಸರ್ಕಾರ ರಚಿಸಿದ್ದು, ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿದ್ದಾರೆ. ಇಂದು ನಡೆಯುತ್ತಿರುವ ಫಾಲ್ಟಾ ಕ್ಷೇತ್ರದ ಮತ ಎಣಿಕೆಯು ಮೇ 24 ರಂದು ಭಾನುವಾರ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.





















