Home ಜಿಲ್ಲೆ ಗ್ಯಾರೆಂಟಿ ಯೋಜನೆ:ಸಿ.ಎಂ ಹೇಳಿಕೆಗೆ ಖಂಡನೆ

ಗ್ಯಾರೆಂಟಿ ಯೋಜನೆ:ಸಿ.ಎಂ ಹೇಳಿಕೆಗೆ ಖಂಡನೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಜೂ.20: ಮತದಾರರಿಗಷ್ಟೇ ಗ್ಯಾರಂಟಿ ಯೋಜನೆಗಳು ಎಂಬ ಅರ್ಥ ಬರುವ ಸಿಎಂ ಅವರ ಅಹಂಕಾರ ಮತ್ತು ಜನವಿರೋಧಿ ಹೇಳಿಕೆಯನ್ನು ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷರಾದ ಚಂದ್ರಕುಮಾರ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆ ಎಂಬುದು ಒಂದು ಪಕ್ಷದ ಅಥವಾ ಒಂದು ವರ್ಗದ ಪ್ರತಿನಿಧಿತ್ವವಲ್ಲ; ಅದು ರಾಜ್ಯದ ಪ್ರತಿಯೊಬ್ಬ ನಾಗರಿಕರ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿಯ ಸ್ಥಾನವಾಗಿದೆ.

ಗ್ಯಾರಂಟಿ ಯೋಜನೆಗಳು ಮುಖ್ಯಮಂತ್ರಿ ಅಥವಾ ಆಡಳಿತ ಪಕ್ಷದ ವೈಯಕ್ತಿಕ ಆಸ್ತಿಯಲ್ಲ. ಅವು ಜನರ ತೆರಿಗೆ ಹಣದಿಂದ ಜಾರಿಯಾಗುತ್ತಿರುವ ಸಾರ್ವಜನಿಕ ಯೋಜನೆಗಳಾಗಿವೆ. ತೆರಿಗೆ ಸಂಗ್ರಹಿಸುವಾಗ ಸರ್ಕಾರ ಮತದಾರರು, ಬೆಂಬಲಿಗರು, ವಿರೋಧಿಗಳು ಎಂದು ಭೇದ ಮಾಡುವುದಿಲ್ಲ. ಆದರೆ ಸೌಲಭ್ಯಗಳನ್ನು ನೀಡುವಾಗ ಇಂತಹ ವಿಭಜನೆಯ ಮಾತುಗಳು ಕೇಳಿಬರುತ್ತಿರುವುದು ಅತ್ಯಂತ ಖೇದಕರ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ.

ಜನರ ಹಣದಿಂದ ನಡೆಯುವ ಯೋಜನೆಗಳನ್ನು ಪಕ್ಷದ ಸಾಧನೆಯಂತೆ ಬಿಂಬಿಸಿ, ಅವುಗಳ ಮೇಲೆ ರಾಜಕೀಯ ಸ್ವಾಮಿತ್ವ ಸಾಧಿಸಲು ಯತ್ನಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಕೆಲಸವಾಗಿದೆ. ಮುಖ್ಯಮಂತ್ರಿ ಅವರು ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಜನರನ್ನು ವಿಭಜಿಸುವ ಹಾಗೂ ಅವಮಾನಿಸುವ ಹೇಳಿಕೆಗಳನ್ನು ತಕ್ಷಣ ಹಿಂಪಡೆಯಬೇಕು.

ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯದ ಮಹಿಳೆಯರ ಮತದಾನದ ಹಕ್ಕು ಹಾಗೂ ಸರ್ಕಾರಿ ಸೌಲಭ್ಯಗಳ ಹಕ್ಕುಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮಹಿಳೆಯರನ್ನು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹಾಗೂ ಸರ್ಕಾರಿ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಬಾರದು.

ಇಲ್ಲವಾದರೆ ರಾಜ್ಯದ ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವ ಎಲ್ಲ ವರ್ಗಗಳ ಜನರು ಇಂತಹ ಬೇಜವಾಬ್ದಾರಿ ರಾಜಕಾರಣಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆಯ  ಎಚ್ಚರಿಸಿದೆ ಎಂದು ಅಧ್ಯಕ್ಷೆ ಚಂದ್ರಕುಮಾರಿ, ಪ್ರಧಾನ ಕಾರ್ಯದರ್ಶಿ  ದೇವಿ ತಿಳಿಸಿದ್ದಾರೆ.