
ಮಂಗಳೂರು-ಗುಣಮಟ್ಟದ ತಾಯಿ ಮಗುವಿನ ಆರೋಗ್ಯ ಸೇವೆಯನ್ನು ನೀಡುತ್ತಾ ಬಂದ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಲೇಡಿಗೋಷನ್ ಆಸ್ಪತ್ರೆ ರಾಜ್ಯ ಮಟ್ಟದಲ್ಲಿ ಮತ್ತೆ ಅತ್ಯುನ್ನತ ಸ್ಥಾನದಲ್ಲಿ ನಿಂತು ಮತ್ತೊಮ್ಮೆ ತನ್ನ ಘನತೆಯನ್ನು ಎತ್ತಿ ತೋರಿಸಿದೆ. ಅನೇಕ ವಿನೂತನ ಕಾರ್ಯಕ್ರಮ ಹಾಗೂ ವಿಧಾನಗಳನ್ನು ಅಳವಡಿಸಿಕೊಂಡು ತಾಯಿಮರಣ ಹಾಗೂ ಶಿಶು ಮರಣದ ಪ್ರಮಾಣವನ್ನು ಕನಿಷ್ಠತೆಗೆ ತಂದ ಹೆಗ್ಗಳಿಕೆ ಲೇಡಿಗೋಷನ್ ಆಸ್ಪತ್ರೆಯದು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಐಪಾಸ್ ಫೌಂಡೇಶನ್ ಇದರ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ ಜಿಲ್ಲಾಸ್ಪತ್ರೆಗಳ ಪೈಕಿ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ೨೦೨೫-೨೬ ರಲ್ಲಿ ಕಾನೂನುಬದ್ಧವಾಗಿ ನಡೆದ ಗರ್ಭಪಾತ ಮತ್ತು ಅದರ ನಂತರದ ಆರೈಕೆಯಲ್ಲಿ ಶೇಕಡಾ ನೂರರಷ್ಟು ತಾಯಿ ಆರೋಗ್ಯವನ್ನು ಕಾಪಾಡಿ ತಾಯಿ ಮರಣವನ್ನು ಶೂನ್ಯಕ್ಕೆ ತಂದಂತಹ ಕೀರ್ತಿಗೆ ಪಾತ್ರವಾಗಿ ರಾಜ್ಯಕ್ಕೆ ಮೊದಲನೇ ಸ್ಥಾನದಲ್ಲಿರುತ್ತದೆ. ಅಂಕಿ ಅಂಶಗಳ ಪ್ರಕಾರ ಸದ್ರಿ ಆರ್ಥಿಕ ವರ್ಷದಲ್ಲಿ ೩೦೪ ಕಾನೂನು ಮಿತಿಯ ಗರ್ಭಪಾತಗಳನ್ನು ಲೇಡಿಗೋಷನ್ ಆಸ್ಪತ್ರೆ ಸಮರ್ಥವಾಗಿ ನಿಭಾಯಿಸಿದ್ದು ಪ್ರತಿಯೊಂದು ಪ್ರಕರಣವೂ ಗುಣಮಟ್ಟದ ಕಾಂಪ್ರೆಹೆನ್ಸಿವ್ ಅಬಾರ್ಶನ್ ಕೇರ್ ಕಾರ್ಯಕ್ರಮದಡಿಯಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸಿ ಝೀರೋ ಮರಣ ಪ್ರಮಾಣವನ್ನು ದಾಖಲಿಸಿದೆ.

*೨೦೨೫-೨೬ ನೇ ಸಾಲಿನ ಅಂಕಿ ಅಂಶಗಳು
೯ ವಾರಗಳ ಮೊದಲ ಗರ್ಭಪಾತ -೧೯೧, ೧೦ ರಿಂದ ೧೨ವಾರಗಳು-೩೧, ೧೨ ರಿಂದ ೨೦ ವಾರಗಳು-೫೨, ೨೦ ರಿಂದ ೨೪ ವಾರಗಳು-೨೫, ೨೪ ವಾರಗಳ ನಂತರ-೫,ಒಟ್ಟು -೩೦೪. ಅಲ್ಲದೆ ಶೇಕಡಾ ೯೫ ರಷ್ಟು ಫಲಾನುಭವಿಗಳಿಗೆ ಕುಟುಂಬ ಕಲ್ಯಾಣ ವಿಧಾನಗಳ ಅಳವಡಿಕೆಯನ್ನು ಪ್ರೆರೇಪಿಸಿ ಅನುಸರಣೆ ಮಾಡುವಂತೆ ಮಾಡಿದ ಹಿರಿಮೆಗೆ ಕೂಡಾ ಲೇಡಿಗೋಷನ್ ಆಸ್ಪತ್ರೆ ಒಳಗಾಗಿದೆ.
ಇಂಥಹ ಅಪೂರ್ವ ಸಾಧನೆಯನ್ನು ಮಾಡಿ ಕರ್ನಾಟಕ ರಾಜ್ಯದಲ್ಲಿ ಗರ್ಭಪಾತಾನಂತರದ ತಾಯಿ ಆರೋಗ್ಯ ಕ್ಷೇತ್ರದಲ್ಲಿಯ ಗುಣ ಮಟ್ಟದ ಸೇವೆಗಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ಪ್ರಶಸ್ತಿಗೆ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಪಾತ್ರವಾಗಿದೆ.
ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್.ಎಂ.ಆರ್. ಈ ಬಗ್ಗೆ ಮಾಹಿತಿ ನೀಡಿ, ಗುರುತರವಾದ ಈ ಯಶಸ್ಸಿಗೆ ಕಾರಣೀಕರ್ತರಾದ ಕೆ.ಎಂ.ಸಿ.ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಅರಿವಳಿಕೆ ವಿಭಾಗ, ರೇಡಿಯೋಡಯೋಗ್ನೋಸಿಸ್ ವಿಭಾಗ ಮತ್ತು ನವಜಾತ ಶಿಶು ವಿಭಾಗದ ಸರ್ವತಜ್ಞರನ್ನು ಅಭಿನಂದಿಸಿದರು. ಅಲ್ಲದೆ ಶುಶ್ರೂಷಕ ವೃಂದ, ಅರೆ ವೈದ್ಯಕೀಯ ಸಿಬ್ಬಂದಿಗಳು, ತಾಂತ್ರಿಕ ವರ್ಗದವರ ಸೇವೆ ಅನನ್ಯ ಎಂದರು. ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಿಕೊಂಡಿರುವ ವ್ಯಾಟ್ಸಪ್ ಹೈರಿಸ್ಕ್ ಪ್ರೆಗ್ನೆನ್ಸಿ ಟ್ರ್ಯಾಕಿಂಗ್ ಸಿಸ್ಟಮ್, ಪ್ರಸೂತಿ ತೀವ್ರ ನಿಗಾ ಘಟಕ, ಪ್ರಸೂತಿ ಕ್ರಿಟಿಕಲ್ ಕೇರ್ ಘಟಕ, ಹೈ ರಿಸ್ಕ್ ಪ್ರೆಗ್ನೆನ್ಸಿ ಡೆಲಿವರಿ ಘಟಕ ಇವೆಲ್ಲವೂಗಳೂ ಪೂರಕವಾದ ವ್ಯವಸ್ಥೆಗಳಾಗಿ ತಾಯಿ ಮರಣದ ದರವನ್ನು ಶೂನ್ಯವಾಗಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ ಎಂದರು.
ವಿವಿಧ ಸಂಘ ಸಂಸ್ಥೆಗಳ ಸಿ.ಎಸ್.ಆರ್.ಅನುದಾನದಿಂದ ಕ್ರೋಡೀಕರಿಸಲ್ಪಟ್ಟ ಅತ್ಯಾಧುನಿಕ ಜೀವರಕ್ಷಕ ಉಪಕರಣಗಳು ಗುಣಮಟ್ಟದ ಸೇವಾ ಸೌಲಭ್ಯಗಳನ್ನು ನೀಡುವಲ್ಲಿ ಸಹಕಾರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಮಾನ್ಯ ಆರೋಗ್ಯ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಇಲಾಖಾ ಅಧಿಕಾರಿಗಳು, ಸಾರ್ವಜನಿಕ ಸೇವಾ ಮನೋಭಾವದ ಸಮಾಜ ಮುಖಿ ಚಿಂತನೆಯ ಸಂಸ್ಥೆಗಳ ಸಹಕಾರವನ್ನು ಕೊಂಡಾಡಿದ ವೈದ್ಯಕೀಯ ಅಧೀಕ್ಷಕರು ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ದೊರಕಿದ ಸ್ಥಾನಮಾನದ ಉಳಿವಿಗಾಗಿ ಕಟಿಬದ್ಧರಾಗಿ ನಿರಂತರ ಶ್ರಮಿಸಿ ತಾಯಂದಿರ ಬಾಳಲ್ಲಿ ಆಶಾಜ್ಯೋತಿಯನ್ನು ಬೆಳಗಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.


























