Home ಜಿಲ್ಲೆ ಮಂಗಳೂರು ಕೇರಳದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ- ಸುರೇಂದ್ರನ್ ಭವಿಷ್ಯ

ಕೇರಳದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ- ಸುರೇಂದ್ರನ್ ಭವಿಷ್ಯ

ಪುತ್ತೂರು: ಪುತ್ತೂರಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕೇರಳಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದಾಗಿ ಕೇರಳದಲ್ಲಿ ಸಂಘಟನೆಯ ದೌರ್ಬಲ್ಯ ಮರೆಯಾಗಿದೆ. ಈ ಬಾರಿ ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಕನಸು ಈಡೇರಲಿದೆ ಎಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುರೇಂದ್ರನ್ ಹೇಳಿದರು.
ಶುಕ್ರವಾರ ಪುತ್ತೂರಿಗೆ ಭೇಟಿ ನೀಡಿದ ಅವರು ಬಿಜೆಪಿ ಕಛೇರಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.
ನೀವು ಕೇರಳ ಚುನಾವಣೆಯಲ್ಲಿ ನಮ್ಮ ಜತೆಗೆ ಸಹಕರಿಸಿದ್ದೀರಿ. ನಿಮ್ಮ ಶ್ರಮ ಮತ್ತು ಪ್ರೀತಿ ನಮ್ಮ ಹೃದಯದಲ್ಲಿದೆ. ಕಳೆದ ಬಾರಿ ಪುತ್ತೂರಿನಲ್ಲಿ ನಾವೆಲ್ಲಾ ದು:ಖಪಡುವ ಫಲಿತಾಂಶ ಪಡೆದಿದ್ದೇವೆ. ನಮಗೂ ಈ ಬಗ್ಗೆ ಬೇಸರವಿದೆ. ಮುಂದಿನ ಬಾರಿ ನಾವೂ ನಿಮ್ಮ ಜತೆಗಿರುತ್ತೇವೆ. ನಾವೆಲ್ಲಾ ಸೇರಿ ಮತ್ತೆ ಗೆಲುವಿನ ದಡವನ್ನು ಸೇರೋಣ ಎಂದು ಅವರು ಹೇಳಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತ ಮಾತನಾಡಿ, ತಮ್ಮ ಕೇತ್ರ ಸೇರಿದಂತೆ ಕೇರಳ ರಾಜ್ಯ ಚುನಾವಣೆಯಲ್ಲಿ ಪುತ್ತೂರಿನ ಕಾರ್ಯಕರ್ತರು ಕೆಲಸ ಮಾಡಿದ ಅಭಿಮಾನದಿಂದ ಸುರೇಂದ್ರನ್ ಭೇಟಿ ನೀಡಿದ್ದಾರೆ. ಬಹಳ ವರ್ಷಗಳಿಂದ ಕೇರಳದಲ್ಲಿ ಬಿಜೆಪಿಯ ಪ್ರತಿ ಕಾರ್ಯಕರ್ತರಿಗೆ ಧೈರ್ಯ, ಆತ್ಮವಿಶ್ವಾಸ ತುಂಬಿದ ವ್ಯಕ್ತಿ. ರಾಷ್ಟ್ರದಲ್ಲೇ ೩೦೦ಕ್ಕೂ ಹೆಚ್ಚು ಕೇಸುಗಳನ್ನು ಮೈಗೆಳೆದುಕೊಂಡು ಜೈಲಿಗೆ ಹೋಗಿ ಬಂದರೂ ಸಂಘಟನೆಯ ವಿಚಾರದಲ್ಲಿ ಒಂದಿಂಚೂ ಹಿಂದೆ ಸರಿಯದ ಒಬ್ಬನೇ ಒಬ್ಬ ವ್ಯಕ್ತಿ ಸುರೇಂದ್ರನ್. ಮಂಜೇಶ್ವರ ಕ್ಷೇತ್ರದಲ್ಲಿ ೨ ಬಾರಿ ವೀರೋಚಿತ ಸೋಲು ಕಂಡರೂ ಈ ಬಾರಿ ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ ಎಂದರು.
ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಗ್ರಾಮಾಂತರ ಮಂಡಲದ ಲೋಕೇಶ್ ಚಾಕೋಟೆ ವೇದಿಕೆಯಲ್ಲಿದ್ದರು. ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸ್ವಾಗತಿಸಿದರು.
ಸುರೇಂದ್ರನ್ ಟೆಂಪಲ್ ರನ್..
ಸುರೇಂದ್ರನ್ ಅವರು ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವರಿಗೆ ತುಪ್ಪದ ದೀಪ ಬೆಳಗಿ ಗೆಲುವಿಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಅವರು ಸುರೇಂದ್ರನ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಬಳಿಕ ಲಕ್ಷ್ಮಿ ವೆಂಕಟರಮಣ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಬಿಜೆಪಿ ಮುಖಂಡ ಪ್ರಸನ್ನ ಮಾರ್ತ ಅವರ ಮನೆಗೆ ಭೇಟಿ ನೀಡಿದರು.
ಈ ವೇಳೆ ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ್ ಉಜಿರೆಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಸುನೀತ್ ಭಟ್, ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ಶರತ್ ಆಳ್ವ, ಕಿರಣ್ ಬಲ್ನಾಡ್, ನಿರಂಜನ ಮಾನ್ಯ, ಹರಿಪ್ರಸಾದ್ ಯಾದವ್, ವಿರೂಪಾಕ್ಷ ಭಟ್, ರಾಜೇಶ್ ಬನ್ನೂರು, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ವಸಂತಲಕ್ಷ್ಮಿ, ವಿದ್ಯಾಗೌರಿ, ಗೌರಿ ಬನ್ನೂರು ಸೇರಿದಂತೆ ಮಂಜೇಶ್ವರ ಬಿಜೆಪಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.