Home ಜಿಲ್ಲೆ ಸಂಜೀವರಾಯನಕೋಟೆಯಲ್ಲಿ   ಶ್ರೀ ಸದ್ಗುರು ಸಿದ್ಧಾರೂಡರ ಕತಾಮೃತ ಪಾರಾಯಣ

ಸಂಜೀವರಾಯನಕೋಟೆಯಲ್ಲಿ   ಶ್ರೀ ಸದ್ಗುರು ಸಿದ್ಧಾರೂಡರ ಕತಾಮೃತ ಪಾರಾಯಣ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮೇ.22: ತಾಲೂಕಿನ ಸಂಜೀವರಾಯನಕೋಟೆ ಗ್ರಾಮದಲ್ಲಿ ಭಕ್ತಿಭಾವ ಮತ್ತು ಆಧ್ಯಾತ್ಮಿಕ ಚೈತನ್ಯ ತುಂಬಿದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದ ಶ್ರೀ ನಂದ್ವಾರಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸದ್ಗುರು ಸಿದ್ಧಾರೂಡರ ಕತಾಮೃತ ಪಾರಾಯಣ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯುತ್ತಿದೆ. ಪ್ರತಿದಿನ ಸಂಜೆ 6 ಗಂಟೆಯಿಂದ ಆರಂಭವಾಗುತ್ತಿರುವ ಈ ಧಾರ್ಮಿಕ ಕಾರ್ಯಕ್ರಮವು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಾಗದ ಭಕ್ತರನ್ನು ಆಕರ್ಷಿಸುತ್ತಿದೆ.

ದಿನಾಂಕ 18-05-2026ರಿಂದ 26-05-2026ರವರೆಗೆ ನಡೆಯಲಿರುವ ಈ ಮಹೋತ್ಸವದಲ್ಲಿ ಶ್ರೀ ಸದ್ಗುರು ಸಿದ್ಧಾರೂಢರ ಜೀವನ ತತ್ವ, ಧರ್ಮೋಪದೇಶ, ಭಕ್ತಿ ಮಾರ್ಗ ಮತ್ತು ಸತ್ಸಂಗದ ಮಹತ್ವವನ್ನು ಕತಾಮೃತ ರೂಪದಲ್ಲಿ ಭಕ್ತರಿಗೆ ತಿಳಿಸಲಾಗುತ್ತಿದೆ. ದೇವಸ್ಥಾನದಲ್ಲಿ ನಿತ್ಯ ಭಜನೆ, ಮಂತ್ರೋಚ್ಚಾರಣೆ, ಪಾರಾಯಣ ಮತ್ತು ಪ್ರವಚನಗಳಿಂದ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

ಈ ವೇಳೆ ಎತ್ತಿನಬೂದಿಹಾಳ ಗ್ರಾಮದ ಪ್ರವಚನಕಾರ ಮುದ್ದೆ ನಾಗರಾಜ್ ಮಾತನಾಡಿ, “ಮಾನವ ಜನ್ಮ ಅತ್ಯಂತ ಅಪರೂಪವಾದುದು. 84 ಲಕ್ಷ ಜೀವ ರಾಶಿಗಳಲ್ಲಿ ಅನೇಕ ಜನ್ಮಗಳನ್ನು ಅನುಭವಿಸಿದ ನಂತರ ಮನುಷ್ಯ ಜನ್ಮ ದೊರೆಯುತ್ತದೆ. ಈ ಜನ್ಮವನ್ನು ಕೇವಲ ಭೌತಿಕ ಸುಖಗಳಿಗೆ ಮಾತ್ರ ಸೀಮಿತಗೊಳಿಸದೇ, ಧರ್ಮ, ದಾನ, ಭಕ್ತಿ ಹಾಗೂ ಸತ್ಸಂಗದ ಮೂಲಕ ಸಾರ್ಥಕ ಮಾಡಿಕೊಳ್ಳಬೇಕು. ಶ್ರೀ ಸದ್ಗುರು ಸಿದ್ಧಾರೂಢರು ಜನರ ಅಜ್ಞಾನವನ್ನು ಹೋಗಲಾಡಿಸಿ, ಸತ್ಯ ಮತ್ತು ಆತ್ಮಜ್ಞಾನಕ್ಕೆ ದಾರಿ ತೋರಿದ ಮಹಾನ್ ಸಂತರು. ಅವರ ಜೀವನವೇ ಮಾನವಕುಲಕ್ಕೆ ದೀಪಸ್ತಂಭವಾಗಿದೆ,” ಎಂದು ಹೇಳಿದರು.

ಮುಂದುವರಿದು ಅವರು, “ಇಂದಿನ ಯಾಂತ್ರಿಕ ಬದುಕಿನಲ್ಲಿ ಮಾನವರು ಆತ್ಮಶಾಂತಿಯನ್ನು ಕಳೆದುಕೊಂಡಿದ್ದಾರೆ. ಅಂತಹ ಸಂದರ್ಭದಲ್ಲಿ ‘ಓಂ ನಮಃ ಶಿವಾಯ’ ಮಂತ್ರ ಪಠಣೆ ಮತ್ತು ಸತ್ಸಂಗದ ಮಾರ್ಗ ಮನಸ್ಸಿಗೆ ಶಾಂತಿ ನೀಡುತ್ತದೆ. ಸಿದ್ಧಾರೂಢರ ಕಥಾಮೃತವನ್ನು ಶ್ರದ್ಧೆಯಿಂದ ಓದಿದರೆ ಹಾಗೂ ಕೇಳಿದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳು ಸಿದ್ಧಿಸುತ್ತವೆ. ಈ ಪವಿತ್ರ ಗ್ರಂಥದಲ್ಲಿ ನಾಲ್ಕು ವೇದಗಳು, ಆರು ಶಾಸ್ತ್ರಗಳು, ಹದಿನೆಂಟು ಪುರಾಣಗಳು ಹಾಗೂ ಇಪ್ಪತ್ತೈದು ಆಗಮಗಳ ಸಾರ ಅಡಕವಾಗಿದೆ. ಪ್ರತಿಯೊಬ್ಬರ ಮನಸ್ಸಿನಲ್ಲಿರುವ ದುಷ್ಟ ಗುಣಗಳನ್ನು ದೂರ ಮಾಡಿ, ಒಳ್ಳೆಯ ಜೀವನದ ಮಾರ್ಗವನ್ನು ತೋರಿಸುವ ಶಕ್ತಿ ಸತ್ಸಂಗಕ್ಕಿದೆ,” ಎಂದು ಭಕ್ತರಿಗೆ ಆಧ್ಯಾತ್ಮಿಕ ಸಂದೇಶ ನೀಡಿದರು.

ಇದೇ ವೇಳೆ ಕತಾಮೃತ ಪಾರಾಯಣ ಸೇವೆಯನ್ನು ನೆರವೇರಿಸುತ್ತಿರುವ ಗ್ರಾಮದ ಹೊನ್ನಪ್ಪನವರ ಮಗ ಈರಣ್ಣ ಮಾತನಾಡಿ, “ಗ್ರಾಮದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಯುವ ಪೀಳಿಗೆಗೆ ಸಂಸ್ಕಾರ ಮತ್ತು ಭಕ್ತಿಯ ಅರಿವು ಮೂಡುತ್ತದೆ. ಶ್ರೀ ಸದ್ಗುರು ಸಿದ್ಧಾರೂಢರ ಕೃಪೆಯಿಂದ ಈ ಕಾರ್ಯಕ್ರಮವನ್ನು ಆಯೋಜಿಸುವ ಅವಕಾಶ ದೊರೆತಿದ್ದು ನಮ್ಮ ಕುಟುಂಬಕ್ಕೆ ಇದು ಭಾಗ್ಯವಾಗಿದೆ. ಪ್ರತಿದಿನ ಭಕ್ತರು ಭಕ್ತಿಭಾವದಿಂದ ಭಾಗವಹಿಸುತ್ತಿರುವುದು ಸಂತಸ ತಂದಿದೆ,” ಎಂದು ಹೇಳಿದರು.

ಅವರು ಮುಂದುವರಿದು, “ಇಂದಿನ ಕಾಲದಲ್ಲಿ ಜನರು ಒತ್ತಡದ ಬದುಕಿನಲ್ಲಿ ಆಧ್ಯಾತ್ಮಿಕತೆಯಿಂದ ದೂರವಾಗುತ್ತಿದ್ದಾರೆ. ಆದರೆ ಇಂತಹ ಕತಾಮೃತ ಪಾರಾಯಣಗಳು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ. ಎಲ್ಲ ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕು,” ಎಂದು ಮನವಿ ಮಾಡಿದರು.

ಶ್ರೀ ಸದ್ಗುರು ಶಿವಾನಂದ ಭಾರತಿ ಮಹಾಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಗುರುಹಿರಿಯರು, ಮಹಿಳೆಯರು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ನಿತ್ಯ ಪ್ರಸಾದ ವಿನಿಯೋಗ, ಭಜನಾ ಕಾರ್ಯಕ್ರಮ ಹಾಗೂ ಸತ್ಸಂಗಗಳು ನಡೆಯುತ್ತಿದ್ದು, ಸಂಜೀವರಾಯನಕೋಟೆ ಗ್ರಾಮದಲ್ಲಿ ಸಂಪೂರ್ಣ ಭಕ್ತಿಮಯ ವಾತಾವರಣ ನಿರ್ಮಾಣವಾಗಿದೆ.