Home ಜಿಲ್ಲೆ ಮಂಗಳೂರು ಮಹಿಳೆಯರು ಸಮಾಜದಲ್ಲಿ ತಮ್ಮತನವನ್ನು ಉಳಿಸಿಕೊಳ್ಳಬೇಕು – ಶೈಲಜಾ ಬಿ.

ಮಹಿಳೆಯರು ಸಮಾಜದಲ್ಲಿ ತಮ್ಮತನವನ್ನು ಉಳಿಸಿಕೊಳ್ಳಬೇಕು – ಶೈಲಜಾ ಬಿ.

ಸುಳ್ಯದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಸುಳ್ಯ:ಮಹಿಳೆಯರು ತಮ್ಮತನವನ್ನು ಉಳಿಸಿಕೊಂಡು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದು ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಬಿ ಹೇಳಿದ್ದಾರೆ.
ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಸುಳ್ಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯಯರು ಬೆಳೆಯಲು ಕುಟುಂಬದಲ್ಲಿ ಸಮಾನತೆ, ಪ್ರೋತ್ಸಾಹ ಇರಬೇಕು ಕೀಳರಿಮೆ ಇರಬಾರದು. ಮಹಿಳೆಯರಿಗೆ ಶೇ.೫೦ ಮೀಸಲಾತಿ ಲಭಿಸಿರುವುದು ಮಹಿಳಾ ಸಬಲೀಕರಣದ ಮೈಲುಗಲ್ಲು. ಆದರೆ ಇಂದು ಕೂಡ ಮಹಿಳೆಯರ ಮೇಲೆ ಹಲವಾರು ದೌರ್ಜನ್ಯಗಳು ನಡೆಯುತ್ತಿರುವುದು, ದೌರ್ಜನ್ಯ, ಅತ್ಯಾಚಾರ ಸೀರೋ ಆಗದೇ ಇರುವುದು ದುರದೃಷ್ಟಕರ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ಮತ್ತಿ ಪ್ರಸೂತಿ ತಜ್ಞೆ ಡಾ.ಶಾಲಿನಿ ವಿ.ಎಲ್ ಮಾತನಾಡಿ ಇಂದು ಸಮಾಜದಲ್ಲಿ ಶೇ.೪೦ ರಷ್ಟು ಮಹಿಳೆಯರು ಪರಾವಲಂಬಿಗಳಾಗಿ ಬದುಕುತ್ತಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸ ಮಹಿಳಾ ಸಂಘಟನೆಗಳು ಮಾಡಬೇಕು. ಸಮಾಜದಲ್ಲಿ ಮಹಿಳಾ ದೌರ್ಜನ್ಯ ನಡೆದರೆ ಅದು ಸಮಾಜಕ್ಕೆ ಕಪ್ಪು ಚುಕ್ಕೆ
ಅವಶ್ಯಕತೆ ಇರುವವರಿಗೆ, ನೊಂದವರಿಗೆ ಮಹಿಳಾ ಸಂಘಟನಗಳು ಧ್ವನಿಯಾಗಬೇಕು. ಹೆಣ್ಣು ಗಂಡು ಸಮಾನವಾಗಿ, ಒಟ್ಟಾಗಿ ನಡೆದರೆ ಮಾತ್ರ ಸಮಾಜದ ಉದ್ದಾರ ಆಗಲು ಸಾಧ್ಯ ಎಂದು ಅವರು ಹೇಳಿದರು.
ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಪುಷ್ಪಾ ಡಿ ಪ್ರಸಾದ್ ಕಾನತ್ತೂರ್ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಹರಿಣಿ ಸದಾಶಿವ ಅತಿಥಿಯಾಗಿದ್ದರು. ಸಮಾರಂಭದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಉದ್ಯಮ ಕ್ಷೇತ್ರದಲ್ಲಿ ಉಷಾ ಕಸ್ತೂರಿ ಶಂಕರ್, ಹೈನುಗಾರಿಕಾ ಕ್ಷೇತ್ರದಲ್ಲಿ
ಹೇಮಾ ಪುರುಷೋತ್ತಮ ಕೊಯಿಕುಳಿ, ಸಾಂದೀಪ್ ಶಾಲೆಯ ಶಿಕ್ಷಕಿ ಮೀನಾಕ್ಷಿ, ಅಂಗನವಾಡಿ ಸಹಾಯಕಿ ಗುಲಾಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಿಳಾ ಮಂಡಲಗಳ ಒಕ್ಕೂಟದ ಕೋಶಾಧಿಕಾರಿ ಚಂದ್ರಾಕ್ಷಿ ಜೆ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹೇಮಾ ವೇಣುಗೋಪಾಲ್ ವಂದಿಸಿದರು. ಚಿತ್ರಲೇಖಾ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.