Home ಸುದ್ದಿ ರಾಷ್ಟ್ರೀಯ ಭಾರತೀಯ ಮಾರುಕಟ್ಟೆಗೆ ಮರಳಿದ ವಿದೇಶಿ ಹೂಡಿಕೆದಾರರು;ಈಕ್ವಿಟಿ ವಲಯದಲ್ಲೇ ಭಾರಿ ಚೇತರಿಕೆ

ಭಾರತೀಯ ಮಾರುಕಟ್ಟೆಗೆ ಮರಳಿದ ವಿದೇಶಿ ಹೂಡಿಕೆದಾರರು;ಈಕ್ವಿಟಿ ವಲಯದಲ್ಲೇ ಭಾರಿ ಚೇತರಿಕೆ

ಮುಂಬೈ,ಜು.13: ಜೂನ್ ತಿಂಗಳಲ್ಲಿ ಭಾರತೀಯ ಸಾಲದ ಮಾರುಕಟ್ಟೆಯ ಕಡೆಗೆ ಹೆಚ್ಚಿನ ಒಲವು ತೋರಿದ್ದ ವಿದೇಶಿ ಹೂಡಿಕೆದಾರರು, ಪ್ರಸ್ತುತ ಜುಲೈ ತಿಂಗಳ ಆರಂಭದಲ್ಲಿ ಭಾರತೀಯ ಷೇರು ಮಾರುಕಟ್ಟೆಯತ್ತಲೂ ಭಾರಿ ಆಸಕ್ತಿ ತೋರಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ತಮ್ಮ ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿದ್ದ ವಿದೇಶಿ ಪೆÇೀರ್ಟ್‍ಫೆÇೀಲಿಯೋ ಹೂಡಿಕೆದಾರರು ಜುಲೈ ತಿಂಗಳ ಮೊದಲ 10 ದಿನಗಳಲ್ಲೇ ಭಾರಿ ಪ್ರಮಾಣದ ನಿವ್ವಳ ಖರೀದಿದಾರರಾಗಿ ಹೊರಹೊಮ್ಮಿದ್ದಾರೆ.

ಜುಲೈ 1 ರಿಂದ 10 ರವರೆಗಿನ ಕೇವಲ ಹತ್ತು ದಿನಗಳ ಅವಧಿಯಲ್ಲಿ ವಿದೇಶಿ ಹೂಡಿಕೆದಾರರು ಒಟ್ಟು 2.59 ಶತಕೋಟಿ ಡಾಲರ್ (ಸುಮಾರು 24,662 ಕೋಟಿ) ಹಣವನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಸ್ಥಿರವಾಗಿರುವ ರೂಪಾಯಿ ಮೌಲ್ಯ ಮತ್ತು ಸೆಮಿಕಂಡಕ್ಟರ್ ವಲಯದಿಂದ ಜಾಗತಿಕ ಹೂಡಿಕೆಯ ಪ್ರವೃತ್ತಿ ಬದಲಾಗಿರುವುದು ಈ ಮಹತ್ವದ ಬದಲಾವಣೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಜೂನ್ ತಿಂಗಳಲ್ಲಿ ಸರ್ಕಾರದ ಬಾಂಡ್‍ಗಳು ಹಾಗೂ ಸಾಲದ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿದ್ದ ವಿದೇಶಿ ಹೂಡಿಕೆ, ಜುಲೈನಲ್ಲಿ ಷೇರು ಮಾರುಕಟ್ಟೆಯತ್ತಲೂ ಮುಖ ಮಾಡಿದೆ. ಒಟ್ಟು ಹೂಡಿಕೆಯಲ್ಲಿ ಶೇಕಡಾ 61 ಕ್ಕಿಂತ ಹೆಚ್ಚು ಅಂದರೆ 1.6 ಶತಕೋಟಿ ಡಾಲರ್ (ಸುಮಾರು 15,157 ಕೋಟಿ) ಹೂಡಿಕೆ ಕೇವಲ ಷೇರು ಮಾರುಕಟ್ಟೆಯಲ್ಲೇ ನಡೆದಿದೆ. ಉಳಿದಂತೆ ಜಿ.ಎ.ಆರ್ ಮಾರ್ಗದ ಮೂಲಕ 697 ಮಿಲಿಯನ್ ಡಾಲರ್ ಹಾಗೂ ಸಾಮಾನ್ಯ ಸಾಲದ ಮಿತಿಯ ಅಡಿಯಲ್ಲಿ 340 ಮಿಲಿಯನ್ ಡಾಲರ್ ಹೂಡಿಕೆಯಾಗಿದೆ.

ಮಾರ್ಚ್‍ನಿಂದ ಮೇ ತಿಂಗಳ ಅವಧಿಯಲ್ಲಿ ವಿದೇಶಿ ಹೂಡಿಕೆದಾರರು ಒಟ್ಟು 24 ಶತಕೋಟಿ ಡಾಲರ್‍ಗಿಂತಲೂ ಅಧಿಕ ಬಂಡವಾಳವನ್ನು ಹಿಂತೆಗೆದುಕೊಂಡಿದ್ದರು. ಆದರೆ ಜುಲೈನಲ್ಲಿ ಟ್ರೆಂಡ್ ಸಂಪೂರ್ಣ ಬದಲಾಗಿದ್ದು, ಜುಲೈ 1 ರಿಂದ 10 ರವರೆಗಿನ ಪ್ರತಿಯೊಂದು ಟ್ರೇಡಿಂಗ್ ಅವಧಿಯಲ್ಲೂ ಸಕಾರಾತ್ಮಕ ಹೂಡಿಕೆ ದಾಖಲಾಗಿದೆ. ವಿಶೇಷವಾಗಿ ಜುಲೈ 9 ರ ಒಂದೇ ದಿನದಲ್ಲಿ ಸುಮಾರು 978 ಮಿಲಿಯನ್ ಡಾಲರ್ ಹೂಡಿಕೆಯಾಗಿದೆ.

ಕೊರಿಯಾ ಮತ್ತು ತೈವಾನ್ ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆಯಿಂದಾಗಿ ವಿದೇಶಿ ಹೂಡಿಕೆದಾರರು ಮತ್ತೆ ಭಾರತದತ್ತ ಮುಖ ಮಾಡುತ್ತಿದ್ದಾರೆ. ಹೂಡಿಕೆಯ ಬಹುದೊಡ್ಡ ಭಾಗವು ಹಣಕಾಸು ಸೇವಾ ವಲಯಕ್ಕೆ ಹರಿದುಬರುತ್ತಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬಲಿಷ್ಠ ಆರ್ಥಿಕ ಅಡಿಪಾಯ ಮತ್ತು ಸ್ಥಿರವಾದ ಕರೆನ್ಸಿ ಮೌಲ್ಯವೇ ಭಾರತದ ಈ ಆರ್ಥಿಕ ಬಲಕ್ಕೆ ಕಾರಣವಾಗಿದೆ.