
ಸಂಜೆವಾಣಿ ವಾರ್ತೆ
ಹೊಸಪೇಟೆ.ಮೇ.22 ವಸತಿ ಗೃಹವೊಂದರ ಲಿಫ್ಟ್ನಲ್ಲಿ ಸಿಲುಕಿದ್ದ ಇಬ್ಬರು ವ್ಯಕ್ತಿಗಳನ್ನು ಸ್ಥಳೀಯ ಅಗ್ನಿಶಾಮಕ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಗರದಲ್ಲಿಂದು ಬೆಳಗಿನ ಜಾವ ಜರುಗಿದೆ.
ನಗರದ ಮೂರಂಗಡಿ ವೃತ್ತದ ಸುಪ್ರೀಂ ಲಾಡ್ಜ್ ನಲ್ಲಿ ಇಂದು ಬೆಳಗಿನ ಜಾವ 3-30 ರ ಸುಮಾರಿಗೆ ಜರುಗಿದ ಘಟನೆಯಲ್ಲಿ ವಿದ್ಯುತ್ ಕಡಿತದಿಂದಾಗಿ ಬೆಂಗಳೂರು ಮೂಲದ ವಿರೇಶ್ ಹಾಗೂ ಸ್ಥಳೀಯ ಆಟೋ ಚಾಲಕ ಜಿಲಾನ್ ಎಂಬುವವರು ಲಾಡ್ಜ್ ನ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದರು.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ತಮ್ಮಲ್ಲಿನ ಯಂತ್ರೋಪಕರಣಗಳನ್ನು ಬಳಸಿ, ಲಿಪ್ಟ್ ತೆರೆಯುವ ಮೂಲಕ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ ರಕ್ಷಣೆ ಮಾಡಲಾಗಿರುವ ಇಬ್ಬರು ವ್ಯಕ್ತಿಗಳು ಸುರಕ್ಷಿತವಾಗಿದ್ದಾರೆ ಎಂದು ಅಗ್ನಿಶಾಮಕ ಠಾಣೆ ಅಧಿಕಾರಿ ತಿಳಿಸಿದ್ದಾರೆ.
ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ವಾಲಿ ಪ್ರಮೋದ್ ಸುರೇಶ್ ಅವರ ಮಾರ್ಗದರ್ಶನದಲ್ಲಿ ಜರುಗಿದ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಡಿ.ಯುವರಾಜ್, ಚಾಲಕ ಸಂತೋಷ್ ಮೇಟಿ ಮಠ, ಸಿಬ್ಬಂದಿಗಳಾದ ಕನಕರಾಯ, ಬಾವೇಶ್, ವಿಜಯ ಕುಮಾರ್ ರೆಡ್ಡಿ ಭಾಗವಹಿಸಿದ್ದರು.






















