ಆ ಗುಂಪು ಹೇಳಿದಂತೆ ಶವಗಳನ್ನು ಹೂತಿಟ್ಟೆ:ಅನಾಮಿಕನ ಸ್ಪೋಟಕ ಹೇಳಿಕೆ

ಧರ್ಮಸ್ಥಳ, ಆ.18- 2014ರ ನಂತರ ತಮಿಳುನಾಡಿನಲ್ಲಿದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿತ್ತು. ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ನನ್ನನ್ನು ಕೇಳಿತ್ತು. ನಾನು ಕಾನೂನು ಪ್ರಕಾರವೇ ಶವಗಳನ್ನು ಹೂತಿರುವುದಾಗಿ ಹೇಳಿದ್ದೇ. ಆದರೆ ಈ ಗುಂಪು ತಪ್ಪು ಹೇಳಿಕೆ ನೀಡುವಂತೆ ಒತ್ತಡ ಹಾಕಿತ್ತು ಎಂಬ ಸ್ಪೋಟಕ ಮಾಹಿತಿಯನ್ನು ಸಾಕ್ಷಿದಾರ ವಿಶೇಷಾ ತನಿಖಾ ತಂಡದ ಎದುರು ಬಹಿರಂಗಪಡಿಸಿದ್ದಾನೆ.


ಈತನ ಈ ಹೇಳಿಕೆಯಿಂದಾಗಿ ರಾಜ್ಯ ಹಾಗೂ ದೇಶಾದ್ಯಂತ ತೀವ್ರ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿರುವ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ‘ಬುರುಡೆ’ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ.
2023ರ ಡಿಸೆಂಬರ್ ನಲ್ಲಿ ತಮಿಳುನಾಡಿನಿಂದ ಗುಂಪು ನನ್ನನ್ನು ಕರೆತಂದಿತು. ಕೋರ್ಟ್ ಮುಂದೆ ಹೇಳಿಕೆ ನೀಡಲು ಭಯ ಆಗುತಿತ್ತು. ಮಹಿಳೆ (ಸುಜಾತ ಭಟ್) ದೂರಿನ ನಂತರ ಪೊಲೀಸರು ಹಾಗೂ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಧೈರ್ಯ ಬಂದಿತು. ಆ ಮಹಿಳೆಯೇ ನನ್ನಲ್ಲಿ ಧೈರ್ಯ ತುಂಬಿದರು. ಹೀಗಾಗಿ ನಾನು ಬಂದೆ ಎಂದು ಹೇಳಿರುವುದಾಗಿ ವರದಿಯಾಗಿದೆ.


ಆ ಗುಂಪು ಬುರುಡೆ ತಂದು ಹೇಳಿದ ರೀತಿ ನಡೆದುಕೊಂಡೆ. ಪೊಲೀಸರ ಮುಂದೆ ಏನು ಹೇಳಬೇಕು ಎಂದು ಮೂವರು ಪ್ರತಿನಿತ್ಯ ಹೇಳಿಕೊಡುತ್ತಿದ್ದರು. ಅದೇ ರೀತಿಯಲ್ಲಿ ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ಅನಾಮಿಕ ಅಧಿಕಾರಿಗಳ ಮುಂದೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.


ದೂರುದಾರನ ಹೇಳಿಕೆಯನ್ನು ಎಸ್ಐಟಿ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಅನಾಮಿಕ ವ್ಯಕ್ತಿ ತೋರಿಸಿದ 17 ಜಾಗಗಳ ಪೈಕಿ ಕೇವಲ 2 ಜಾಗಗಳಲ್ಲಿ ಮಾನವ ಅಸ್ಥಿಪಂಜರ ಪತ್ತೆ ನಂತರ ವಿಶೇಷ ತನಿಖಾ ತಂಡದ ಅಧಿಕಾರಿಗಳು ಶೋಧ ಕಾರ್ಯ ಸ್ಥಗಿತಗೊಳಿಸಿ, ಕಳೆದ ಎರಡು ದಿನಗಳಿಂದ ಸಾಕ್ಷಿ-ದೂರುದಾರನ ತೀವ್ರ ವಿಚಾರಣೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.