
ಹುಬ್ಬಳ್ಳಿ,ಮೇ.೬: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವಾಸಿಸುವ ಸಾವಿರಾರು ಬಡ ಕುಟುಂಬಗಳಿಗೆ ನಿವೇಶನ ಒದಗಿಸಬೇಕೆಂದು ಆಗ್ರಹಿಸಿ ಹುಬ್ಬಳ್ಳಿ-ಧಾರವಾಡ ನಿವೇಶನ ರಹಿತರ ಆಂದೋಲನ ಸಮಿತಿ ಆಶ್ರಯದಲ್ಲಿ ನವನಗರದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಾಲಯದ ಮುಂದೆ ಧರಣಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಸಮಿತಿಯ ಮುಖಂಡ ನಾಗರಾಜ ಗುರಿಕಾರ, ನಗರಗಳಲ್ಲಿ ಮನೆ ಮಾರು ಇಲ್ಲದ ದುಡಿಯುವ ವರ್ಗದವರಿಗಾಗಿ ಸರ್ಕಾರಿ ಜಮೀನಿನಲ್ಲಿ ಪ್ರಾಧಿಕಾರದಿಂದ ನಿವೇಶನ ದೊರಕಿಸಿಕೊಡಲು ಹೋರಾಡುತ್ತ ಬಂದಿರುತ್ತದೆ.
ನಗರಾಭಿವೃದ್ಧಿ ಪ್ರಾಧಿಕಾರವು ಆರ್ಥಿಕವಾಗಿ ಹಿಂದುಳಿದ ಹಾಗೂ ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳಿಗೆ ನಿವೇಶನಗಳನ್ನು ರಚಿಸಿ ಯೋಗ್ಯ ದರದಲ್ಲಿ ನಿವೇಶನ ಹಂಚದಿದ್ದರೆ ಈ ನಗರಾಭಿವೃದ್ಧಿ ಪ್ರಾಧಿಕಾರವು ಯಾತಕ್ಕಾಗಿ, ಯಾವ ಉದ್ದೇಶಕ್ಕಾಗಿ ಇರಬೇಕು? ಎಂದರು.
ನಗರದ ಸುತ್ತಮುತ್ತಲು ಸುಮಾರು ೩೬ ಹಳ್ಳಿಗಳನ್ನು ವಶಪಡಿಸಿಕೊಂಡಿದ್ದು ಇದೆ. ಆದರೆ ಆ ೩೬ ಹಳ್ಳಿಗಳಲ್ಲಿ ವಿವಿಧ ತರಹದ ಸರ್ಕಾರಿ ಭೂಮಿ, ಸರ್ಕಾರಿ ಪಡೆ ಇದ್ದಿದ್ದು ಇದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಇಂದು ನಿವೇಶನ ಇಲ್ಲದೆ ಗೋಳಾಡುವ ಪರಿಸ್ಥಿತಿ ತಲೆದೋರಿದೆ. ಸರ್ಕಾರಿ ಪದ ಭೂಮಿಯನ್ನು ನಿವೇಶನ ರಹಿತರಿಗಾಗಿಯೇ ಮೀಸಲಿಟ್ಟು ಯೋಗ್ಯ ದರದಲ್ಲಿ ನಿವೇಶನಗಳನ್ನು ತಕ್ಷಣ ನೀಡಬೇಕು.
ಇಲ್ಲದಿದ್ದರೆ ರಸ್ತೆಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಪ್ರತಿಭಟನೆಯಲ್ಲಿ ಸಮಿತಿಯ ಪ್ರಮುಖರಾದ ನಾಗರಾಜ ನಾಡಕರ್ಣಿ, ಬಿಬಿ ಜಾನ್ ಮುಲ್ಲಾ, ಕಿರಣ್ ಸಿಂಗ್ ರಜಪೂತ, ಮಹಾದೇವಿ ಉಮಜಗಿ, ರಾಜು ಒಡೆಯರ್ ಸೇರಿದಂತೆ ನಿವಾಸ ರಹಿತ ನೂರಾರು ಮಹಿಳೆಯರು ಉಪಸ್ಥಿತರಿದ್ದರು.





















