
ವಿಜಯಪುರ, ಮಾ. 18:ಜಿಲ್ಲೆಯ ಮುದ್ದೇಬಿಹಾಳ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಆಲಿಕಲ್ಲು ಮಳೆ ಬಿದ್ದಿದೆ.
ಕೆಲ ಹೊತ್ತು ಸುರಿದ ಆಲಿಕಲ್ಲು ಮಳೆಯಿಂದ ಜನರು ಕೂಲ್ ಕೂಲ್ ಆಗಿದ್ದಾರೆ.
ಜಿಲ್ಲೆಯಲ್ಲಿ ನಿತ್ಯವೂ ಸುಮಾರು 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಬಿಸಿಲಿನ ಹೊಡೆತಕ್ಕೆ ತತ್ತರಿಸಿದ ಜನರಿಗೆ ಅಕಾಲಿಕ ಆಲಿಕಲ್ಲು ಮಳೆ ತಂಪೆರೆಯಿತು.
ಸುಡು ಬಿಸಿಲಿನ ಮಧ್ಯೆ ಸುರಿದ ಆಲಿಕಲ್ಲು ಮಳೆಯಿಂದಾಗಿ
ರಸ್ತೆ ಮೇಲೆಲ್ಲ ರಾಶಿರಾಶಿ ಆಲಕಲ್ಲುಗಳು ಬಿದ್ದಿದ್ದು, ಜನರು, ಮಕ್ಕಳು ಆಲಿಕಲ್ಲುಗಳನ್ನು ಪಾತ್ರೆಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದು ಕಂಡು ಬಂತು.
ವಿಜಯಪುರ ನಗರದಲ್ಲಿಯೂ ನಿನ್ನೆ ಬಿರುಗಾಳಿ, ಗುಡುಗು, ಮಿಂಚು, ಸಿಡಿಲಿನ ಆರ್ಭಟದೊಂದಿಗೆ ಕೆಲ ಹೊತ್ತು ಮಳೆ ಸುರಿದು ತಂಪೆರೆಯಿತು.
ಅಕಾಲಿಕ ಆಲಿಕಲ್ಲು ಮಳೆಯು ದ್ರಾಕ್ಷಿ, ದಾಳಿಂಬೆ ಮುಂತಾದ ತೋಟಗಾರಿಕೆ ಬೆಳೆಗಳಿಗೆ ಭಾರಿ ಹಾನಿಯಾಗಿದ್ದು, ಆಲಿಕಲ್ಲು ಮಳೆಯಿಂದ ಅಪಾರ ನಷ್ಟ ಉಂಟಾಗಿ ತೋಟಗಾರಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.

























