
ಬೆಂಗಳೂರು, ಮಾ.೨೦- ತುಮಕೂರಿನಲ್ಲಿ ಲಾಕಪ್ ಡೆತ್ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ವಿಚಾರಣೆ ಮಾಡುವಾಗಲೇ ಸಾವಾಗಿದೆ. ಯಾವ ಕಾರಣದಿಂದ ಸಾವಾಗಿದೆ ಎಂಬ ಮಾಹಿತಿ ಇಲ್ಲ. ಅದಕ್ಕಾಗಿ ಸಿಐಡಿ ತನಿಖೆಗೆ ಆದೇಶ ಮಾಡಿದ್ದೇನೆ ಎಂದು ಸುದ್ಧಿಗಾರರಿಗೆ ತಿಳಿಸಿದರು.
ಹಲ್ಲೆ ಮಾಡಿದ್ದಕ್ಕೆ ಸಾವಾಗಿದೆ ಎಂಬ ಕುಟುಬಂಸ್ಥರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಐಡಿ ತನಿಖೆಯಲ್ಲಿ ಹೊಡೆದಿದ್ದರೂ ಗೊತ್ತಾಗಲಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕೂಡ ಗೊತ್ತಾಗುತ್ತದೆ. ಎಲ್ಲ ಘಟನೆಗಳ ಬಗ್ಗೆ ತನಿಖೆ ಮಾಡಿ ಸಿಐಡಿ ವರದಿ ಕೊಡುತ್ತೆ. ಹಲ್ಲೆಯ ಘಟನೆ ಆಗಿದ್ರೆ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡಲು ಹೋಗಿ ಅಪ್ರಾಪ್ತರು ಸಾವಿಗೀಡಾದ ಪ್ರಕರಣದ ಬಗ್ಗೆ ಮಾತನಾಡಿದ ಅವರು ಯುವಕರು ವ್ಹೀಲಿಂಗ್ ಮಾಡುವುದು, ರೀಲ್ಸ್ ಮಾಡಲು ಹೋಗ್ತಾರೆ. ಏನೋ ಒಂದು ಖುಷಿಗೆ ಮಾಡ್ತಾರೆ. ಹಾಗೆ ಮಾಡಬಾರದು ಅಂತ ಬಹಳ ಕಂಟ್ರೋಲ್ ಮಾಡಿದ್ದೇವೆ. ಆದರೂ, ಪೊಲೀಸ್ ಕಣ್ತಪ್ಪಿಸಿ ಹೋಗಿ ಹೀಗೆ ಮಾಡಿಕೊಳ್ಳುತ್ತಾರೆ ಅಂತ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡೋದು ಮಾನಿಟರ್ ಮಾಡಿದ್ದೇವೆ. ಆದರೂ, ಬೆಳಗಿನ ಜಾವ ಹೋಗಿ ವ್ಹೀಲಿಂಗ್ ಮಾಡ್ತಾರೆ. ಇದನ್ನು ಮಾನಿಟರ್ ಮಾಡಲು ಪೊಲೀಸರಿಗೆ ಕಷ್ಟ ಆಗುತ್ತೆ. ಈ ಬಗ್ಗೆ ಅರಿವು ಅಗತ್ಯ ಎಂದರು.






























