Home ಜಿಲ್ಲೆ ಜೋರಾಗಿ ಬೀಸಿದ ಗಾಳಿ ಮಳೆಗೆ ಮುರಿದು ಬಿದ್ದ ಮರ, ವಿದ್ಯುತ್ ಕಂಬಗಳು: ಅಪಾರ ಪ್ರಮಾಣದ ಈರುಳ್ಳಿ...

ಜೋರಾಗಿ ಬೀಸಿದ ಗಾಳಿ ಮಳೆಗೆ ಮುರಿದು ಬಿದ್ದ ಮರ, ವಿದ್ಯುತ್ ಕಂಬಗಳು: ಅಪಾರ ಪ್ರಮಾಣದ ಈರುಳ್ಳಿ ಬೆಳೆ ನಾಶ

ಕೊಲ್ಹಾರ:ಏ.20: ಪಟ್ಟಣದಲ್ಲಿ ಸಂಜೆ ಜೋರಾಗಿ ಬೀಸಿದ ಗಾಳಿ ಮಳೆಗೆ ಇಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳಿ ದೊಡ್ಡ ಗಾತ್ರದ ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದ ಹಿನ್ನೆಲೆ ದೊಡ್ಡ ಅನಾಹುತ ತಪ್ಪಿದೆ.
ಕಳೆದ ಒಂದು ವಾರದಿಂದ ಬಾರಿ ಬಿಸಿಲು ಧಗೆಗೆ ಬಸವಳಿದ ಜನ ಜಾನುವಾರುಗಳಿಗೆ ಭಾನುವಾರ ಸಂಜೆ ಸುರಿದ ಆಲಿಕಲ್ಲು ಮಿಶ್ರಿತ ಮಳೆ ಇಳೆಗೆ ತಂಪು ತಂದಿತು.
ಕಳೆದ ದಿನಗಳಿಂದ ಉತ್ತರ ಕರ್ನಾಟಕದ ಬಹುತೇಕ ಕಡೆ ಜಿಲ್ಲೆಗಳಲ್ಲಿ 40 ಡಿಗ್ರಿ ಉಷ್ಣಾಂಶವುಳ್ಳ ಭಾರೀ ಸುಡು ಬಿಸಿಲು ಜನರನ್ನು ಹೈರಾಣೆ ಮಾಡಿ ಜೀವಕ್ಕೇ ಆಪತ್ತು ತಂದಿತ್ತು. ಮುಂಜಾನೆ 9ಗಂಟೆಗೆ ಪ್ರಾರಂಭವಾಗುವ ಭಾರೀ ಬಿಸಿಲು ಸಂಜೆ 5 ಗಂಟೆ ವರೆಗೆ ಸುಡುತ್ತಿತ್ತು. ಈ ವೇಳೆ ಜನರು ಮನೆಯಿಂದ ಹೊರಗೆ ಬಾರದೆ ಮನೆಯಲ್ಲಿ ಉಳಿಯಬೇಕಾದ ಪರಿಸ್ಥಿತಿ ಇತ್ತು. ಹವಾಮಾನ ಮುನ್ಸೂಚನೆ ಯಂತೆ ಏಪ್ರಿಲ್ 21, 2026ರವರೆಗೆ ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿರುಗಾಳಿ (40-50 ಕಿ.ಮೀ ವೇಗ) ಸಹಿತ ಆಲಿಕಲ್ಲು ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಬಾಗಲಕೋಟೆ, ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬೀಳಲಿದ್ದು, ಬೆಳೆಗಳಿಗೆ ಹಾನಿಯಾಗುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿತ್ತು ಅದರಂತೆ ಇಂದು ಕೊಲ್ಹಾರ ಸುತ್ತ ಮುತ್ತ ಗುಡುಗು ಸಹಿತ ಮಳೆಯಾಗಿದೆ.
ಆಲಿಕಲ್ಲು ಮಳೆ: ತೀವ್ರವಾದ ಬೇಸಿಗೆಯ ಶಾಖ, ವಾತಾವರಣದ ಅಸ್ಥಿರತೆ ಮತ್ತು ಅತಿಯಾದ ತಾಪಮಾನದಿಂದಾಗಿ ಬಲವಾದ ಮೇಲ್ಮುಖ ಗಾಳಿಯು ನೀರಾವಿ ಕಣಗಳನ್ನು ಮೇಲಕ್ಕೆ ಕೊಂಡೊಯ್ದು ಘನೀಕರಣಗೊಂಡು ಮಂಜುಗಡ್ಡೆಯಾಗಿ (ಆಲಿಕಲ್ಲು) ಬೀಳುತ್ತದೆ. ಇದು ತಾಲೂಕಿನ ರೋಣಿಹಾಳ, ಹಿರೇ ಆಸಂಗಿ, ಕೊಲ್ಹಾರ , ಮಟ್ಟಿಹಾಳ ಸೇರಿದಂತೆ ಅನೇಕ ಕಡೆ ಆಲಿಕಲ್ಲು ಮಳೆಯಾಗಿದೆ. ಸಣ್ಣ ಮಕ್ಕಳು ಕಲ್ಲು ಸಕ್ಕರೆಯಂತೆ ಆಲಿಕಲ್ಲು ಗಳನ್ನು ಆಯ್ದುಕೊಂಡು ತಿನ್ನುವುದು ಕಂಡು ಬಂತು. ಬಿಸಿಲಿನಿಂದ ಹೈರಾಣ ಆದ ಜನರಿಗೆ ಮಳೆ ಬಂದು ತಂಪು ತಂದಿತು.


ಮುಖ್ಯವಾಗಿ ಈ ಭಾಗದಲ್ಲಿ ಈರುಳ್ಳಿಯನ್ನು ಹೆಚ್ಚು ಬೆಳೆಯಲಾಗುತ್ತದೆ. ಆದರೆ ಕಟಾವಿಗೆ ಬಂದಿದ್ದ ಈರುಳ್ಳಿ ಬೆಳೆ ಆಲಿಕಲ್ಲು ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಇದರಿಂದ ರೈತನಿಗೆ ಬಹಳ ನಷ್ಟವಾಗಿದೆ.

ಈರಣ್ಣಾ ಅ ಗಣಿ
ಯುವ ರೈತ