
ಔರಾದ್ : ಮಕ್ಕಳಲ್ಲಿ ಶಿಸ್ತು, ನಾಯಕತ್ವ, ಸೇವಾ ಮನೋಭಾವ ಹಾಗೂ ದೇಶಪ್ರೇಮ ಬೆಳೆಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಖಾಸಗಿ ಅನುದಾನ ರಹಿತ ಶಾಲಾ ಸಂಸ್ಥೆಗಳ ಸಂಘದ ಅಧ್ಯಕ್ಷ ಗುರುನಾಥ ದೇಶಮುಖ ಹೇಳಿದರು.
ಪಟ್ಟಣದ ಎಂ. ನಾಮದೇವರಾವ ತಾರೆ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ೭೭ನೇ ಸಂಸ್ಥಾಪನಾ ದಿನ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಪಠ್ಯ ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಮತ್ತು ಉತ್ತಮ ನಾಗರಿಕ ಗುಣಗಳನ್ನು ರೂಪಿಸುವಲ್ಲಿ ಈ ಸಂಸ್ಥೆ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಚಟವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಗಣ್ಯರು ಧ್ವಜಾರೋಹಣ ನೆರವೇರಿಸಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜ ದಿನದ ವಿಶೇಷ ಚೀಟಿಗಳನ್ನು ಬಿಡುಗಡೆಗೊಳಿಸಿದರು. ವಿದ್ಯಾರ್ಥಿಗಳು ಧ್ವಜ ದಿನದ ಚೀಟಿಗಳನ್ನು ಸಾರ್ವಜನಿಕರಿಗೆ ವಿತರಿಸಿ, ಸಂಸ್ಥೆಯ ಸೇವಾ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮಿಬಾಯಿ ತಾರೆ, ಮಿಲಿಂದ್, ಅನುದಾನರಹಿತ ಶಾಲೆಗಳ ಸಂಘದ ಕಮಲನಗರ ಅಧ್ಯಕ್ಷ ರಾಜಕುಮಾರ ಹಂಬಲ್ಪುರೆ, ಕರವೇ ಅಧ್ಯಕ್ಷ ಅನಿಲ ದೇವಕತ್ತೆ, ನಾರಾಯಣ ಸ್ವಾಮಿ, ವ ಗೌತಮ್ ತಾರೆ, ದಿಲೀಪ್ ತಾರೆ, ನಬಿ ಬಾಗವಾನ್, ಮಹೇಂದ್ರ ಸಿಂಗ್, ನಂದಿನಿ ಭಾಲ್ಕೆ, ಚೈತನ್ಯ, ಪಲ್ಲವಿ, ಅಂಬಿಕಾ, ಸುನೀತಾ, ಹೇಮಾ ಸೇರಿದಂತೆ ಇನ್ನಿತರರಿದ್ದರು. ನಾಗಸೇನ ತಾರೆ ನಿರೂಪಿಸಿದರು, ಜ್ಯೋತಿ ತಾರೆ ವಂದಿಸಿದರು.





















