
ಮೈಸೂರು, ಜೂ. ೩೦- ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಗಟ್ಟಿ ಧ್ವನಿಯಲ್ಲಿ ಹೇಳಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಸದ್ಯದಲ್ಲೇ ಪತನವಾಗಲಿದೆ, ವಿಧಾನಸಭೆಗೆ ಮಧ್ಯಂತರ ಚುನಾವಣೆಗಳು ನಡೆಯಲಿವೆ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ಸಾರಸಗಟಾಗಿ ತಳ್ಳಿ ಹಾಕಿದ ಅವರು, ಸರ್ಕಾರ ಐದು ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ ಎಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಂದಾಗಿ, ಒಗ್ಗಟ್ಟಿನಿಂದ ಇದ್ದೇವೆ. ಯಾರೂ ಏನೂ ಹೇಳಿದರೂ ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ. ಆದರೂ ನಮ್ಮ ನಡುವೆ ಅಸಮಾಧಾನವಿದೆ ಎಂಬ ಸುಳ್ಳನ್ನು ಬಿಜೆಪಿಯವರು ಹರಡುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಯಾರು ಏನೇ ಹೇಳಲಿ ನಾನು, ಶಿವಕುಮಾರ್ ಒಗ್ಗಟ್ಟಾಗಿ ಇದ್ದೇವೆ. ಜತೆಯಲ್ಲಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಕೈ ಹಿಡಿದು ಮೇಲೆತ್ತಿ, ಒಗ್ಗಟ್ಟಿನಿಂದ ಇರುವುದನ್ನು ಮುಖ್ಯಮಂತ್ರಿಗಳು ಸಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ದಸರಾ ಉದ್ಘಾಟಿಸಲ್ಲ ಎಂಬ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೂ ತಿರುಗೇಟು ನೀಡಿದ ಅವರು, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ನೀವೇ ಹೇಳಿ ನಾನು ದಸರಾ ಉದ್ಘಾಟಿಸಲ್ಲವಾ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿ, ನಾನು ದಸರಾ ಉದ್ಘಾಟಿಸುತ್ತೇನೆ ಎಂದು ಘಂಟಾ ಘೋಷವಾಗಿ ಹೇಳಿದರು.
ಬಿಜೆಪಿಯವರು ಸರ್ಕಾರದ ವಿರುದ್ಧ ಸುಳ್ಳುಗಳು, ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ. ಇವರೆಲ್ಲಾ ಏನೇ ಹೇಳಿದರೂ ಸರ್ಕಾರ ಐದು ವರ್ಷ ಬಂಡೆಯಂತೆ ಇರುತ್ತದೆ ಎಂದು ಪುನರುಚ್ಛರಿಸಿದರು.
ಮಾಜಿ ಸಚಿವ ಶ್ರೀರಾಮುಲು, ಕಾಂಗ್ರೆಸ್ ಸರ್ಕಾರ ಸದ್ಯದಲ್ಲೇ ಪತನವಾಗಲಿದೆ ಎಂದು ಹೇಳಿರುವುದಕ್ಕೂ ಕಿಡಿಕಾರಿದ ಅವರು, ಶ್ರೀರಾಮುಲು ಎಷ್ಟು ಚುನಾವಣೆ ಸೋತಿದ್ದಾರೆ ನಮಗೆ ಗೊತ್ತಿದೆ. ವಿಧಾನಸಭೆ, ಲೋಕಸಭೆ ಎಲ್ಲ ಚುನಾವಣೆಯಲ್ಲೂ ಸೋತಿದ್ದಾರೆ. ಇಂತಹವರು ಸರ್ಕಾರದ ಬಗ್ಗೆ ಹೇಗೆ ಭವಿಷ್ಯ ನುಡಿಯುತ್ತಾರೆ ಎಂದು ವಾಗ್ದಾಳಿ
ನಡೆಸಿದರು.
ಸಂಘಟನೆಗೆ ಸುರ್ಜೇವಾಲ ಕೆಲಸ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಇಂದು ಬೆಂಗಳೂರಿನಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಸುರ್ಜೆವಾಲಾ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರು ಸಂಘಟನೆಯ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಶಾಸಕರ ಜತೆ ಸಭೆ ನಡೆಸಿದ್ದಾರೆ. ಅವರ ಕೆಲಸವನ್ನು ಅವರು ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಅವರು ಐದು ವರ್ಷ ಪೂರ್ಣಗೊಳಿಸುತ್ತಾರೆ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಜಟಾಪಟಿ ಇದೆ ಎಂಬ ವರದಿಗಳನ್ನು ತಳ್ಳಿ ಹಾಕಿದ ಅವರು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದು ವರ್ಷ ಪೂರ್ಣಗೊಳಿಸುತ್ತಾರೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬದಲಾಯಿಸುವ ಯಾವುದೇ ಚರ್ಚೆಗಳು ಪಕ್ಷದಲ್ಲಿ ನಡೆದಿಲ್ಲ. ಯಾರೂ ಈ ಬಗ್ಗೆ ಮಾತನಾಡಿಯೂ ಇಲ್ಲ. ನಾವೆಲ್ಲಾ ಒಗ್ಗಟ್ಟಿನಿಂದ ಒಂದಾಗಿ ಕೆಲಸ ಮಾಡುತ್ತಿದ್ದೇವೆ ಎಂದು ದೇಶಪಾಂಡೆ ಹೇಳಿದರು.