Home ಜಿಲ್ಲೆ ತುಮಕೂರು ಲೋಕಾ ಬಲೆಗೆ ಬಿದ್ದ ವೈದ್ಯೆ

ಲೋಕಾ ಬಲೆಗೆ ಬಿದ್ದ ವೈದ್ಯೆ

ತುಮಕೂರು, ಮಾ. ೧೦- ಕಣ್ಣಿನ ಶಸ್ತ್ರಚಿಕಿತ್ಸೆ ಬಳಿಕ ಲೆನ್ಸ್ ಅಳವಡಿಸಲು ೬ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೈದ್ಯೆ ಹಾಗೂ ಹೊರಗುತ್ತಿಗೆ ನೌಕರ ಇಬ್ಬರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.


ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ವೈದ್ಯೆ ಡಾ. ಸವಿತಾ ಹಾಗೂ ಹೊರ ಗುತ್ತಿಗೆ ನೌಕರ ಮನೋಜ್ ಎಂಬುವರೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವವರು.


ನಗರದ ಉಪ್ಪಾರಹಳ್ಳಿಯ ಆಟೋ ಚಾಲಕ ಅವಿನಾಶ್ ತಮ್ಮ ತಾಯಿ ಮಂಗಳಮ್ಮ ಅವರನ್ನು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತಜ್ಞ ವೈದ್ಯೆ ಸವಿತಾ ಕಣ್ಣು ಪರೀಕ್ಷಿಸಿದ್ದರು. ಪೊರೆ ಬೆಳೆದಿದೆ, ಶಸ್ತ್ರಚಿಕಿತ್ಸೆ ಮಾಡಬೇಕು. ಶಸ್ತ್ರಚಿಕಿತ್ಸೆಯ ಲೆನ್ಸ್‌ಗೆ ೬ ಸಾವಿರ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು.


ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸೆ ಉಚಿತವಾಗಿ ಮಾಡುತ್ತಾರಲ್ಲ ಎಂದು ಅವಿನಾಶ್ ಪ್ರಶ್ನಿಸಿದ್ದರು. ಉಚಿತವಾಗಿ ಚಿಕಿತ್ಸೆ ಪಡೆಯಬೇಕಾದರೆ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ಹೋಗಬೇಕು. ೬ ಸಾವಿರ ಹಣ ಕೊಟ್ಟರೆ ಮಾತ್ರ ಇಲ್ಲಿಯೇ ಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯ ಡಾ. ಸವಿತಾ ಹೇಳಿದ್ದರು ಎನ್ನಲಾಗಿದೆ.


ಈ ಬಗ್ಗೆ ಅವಿನಾಶ್ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಡಾ. ಸವಿತಾ ಸೂಚನೆ ಮೇರೆಗೆ ಹೊರ ಗುತ್ತಿಗೆ ನೌಕರ ಮನೋಜ್ ಹಣ ತೆಗೆದುಕೊಳ್ಳುವಾಗ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.


ಲೋಕಾಯುಕ್ತ ಇನ್ಸ್‌ಪೆಕ್ಟರ್ ಟಿ.ರಾಜು ಹಣದ ಸಮೇತ ಮನೋಜ್‌ರವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸವಿತಾ ಹೆಸರು ಹೇಳಿದ್ದಾರೆ. ನಂತರ ಇಬ್ಬರನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಲೋಕಾಯುಕ್ತ ಎಸ್ಪಿ ಲಕ್ಷ್ಮೀಕಾಂತ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಕೆ.ಎಂ.ಸಂತೋಷ್ ಮತ್ತು ಮಂಜುನಾಥ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಟಿ.ರಾಜು, ಬಿ.ಮೊಹ್ಮದ್ ಸಲೀಂ ಮತ್ತು ಸಿಬ್ಬಂದಿಯ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.