Home ಜಿಲ್ಲೆ ಕಲಬುರಗಿ ಎಸ್.ಎ.-೧ ಪರೀಕ್ಷೆ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಯೋಜನೆ ರೂಪಿಸಿಅನುಷ್ಠಾನಗೊಳಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ...

ಎಸ್.ಎ.-೧ ಪರೀಕ್ಷೆ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಯೋಜನೆ ರೂಪಿಸಿಅನುಷ್ಠಾನಗೊಳಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಜಿಲ್ಲಾಧಿಕಾರಿ ಇಕ್ರಂ ಶರೀಫ್

ಕಲಬುರಗಿ, ನ.೯.: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ, ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವನ್ನು ಕೇವಲ ಅಂಕಗಳ ದೃಷ್ಟಿಯಿಂದ ನೋಡದೆ, ಮಕ್ಕಳ ಬದುಕಿನಲ್ಲಿ ಬದಲಾವಣೆ ತರುವ ಉದ್ದೇಶದಿಂದ ಪ್ರತಿಯೊಬ್ಬ ಶಿಕ್ಷಕರು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಹೇಳಿದರು.
ನಗರದಲ್ಲಿ  ಗುರುವಾರ ಅರವಿನ ಮನೆ ಸಭಾಂಗಣದಲ್ಲಿ ಸಂಜೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ೨೦೨೬-೨೭ನೇ ಸಾಲಿನ ಎಸ್.ಎ.-೧ (ಜಿಲ್ಲಾ ಮಟ್ಟದ) ಪರೀಕ್ಷೆಯ ಫಲಿತಾಂಶ ವಿಶ್ಲೇಷಣೆ ಹಾಗೂ ಮುಂದಿನ ಶೈಕ್ಷಣಿಕ ಕಾರ್ಯಯೋಜನೆ ಕುರಿತು ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ನೌಕರರಿಗೆ ಮಾಸಿಕ ವೇತನದ ಭದ್ರತೆ ಇದೆ. ಆದರೆ ಸರ್ಕಾರಿ ಶಾಲೆಗಳಿಗೆ ಬರುವ ಬಹುತೇಕ ಮಕ್ಕಳು ಬಡವರು, ನಿರುದ್ಯೋಗಿಗಳು, ಗ್ರಾಮೀಣ ಹಾಗೂ ಅನಕ್ಷರಸ್ಥ ಕುಟುಂಬಗಳ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಹಲವು ಮಕ್ಕಳ ಕನಸುಗಳು ಹತ್ತನೇ ತರಗತಿಯ ಹಂತದಲ್ಲಿಯೇ ನಿಂತುಹೋಗುತ್ತಿವೆ. ಮಕ್ಕಳನ್ನು ಬಡತನದಿಂದ ಹೊರತಂದು, ಉತ್ತಮ ಶಿಕ್ಷಣದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು.
ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಕೇವಲ ಅಂಕಗಳ ಸಾಧನೆ ಎಂದು ಪರಿಗಣಿಸಬಾರದು. ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದಾಗ ಅವರ ಬದುಕು ಸುಧಾರಿಸುವುದರ ಜೊತೆಗೆ ಒಂದು ಉತ್ತಮ ಪೀಳಿಗೆಯೇ ರೂಪುಗೊಳ್ಳುತ್ತದೆ. ಈ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.      ರಾಷ್ಟ್ರದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಒಂದು ಪೀಳಿಗೆಯನ್ನು ಸುಧಾರಿಸುವುದು ನಮ್ಮ ನೈತಿಕ ಹೊಣೆಗಾರಿಕೆಯಾಗಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಸಂಕಲ್ಪವನ್ನು ಪ್ರತಿಯೊಬ್ಬ ಶಿಕ್ಷಕರು ಇಂದಿನಿAದಲೇ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ವೈಯಕ್ತಿಕ ಕಾಳಜಿ ವಹಿಸಿ ಶ್ರಮಿಸಬೇಕು ಎಂದು ಕರೆ ನೀಡಿದರು.
 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ರಾಹುಲ್ ಶರಣಪ್ಪ ಸಂಕನೂರ್ ಮಾತನಾಡಿ, ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಣೆ ಹಾಗೂ ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಳಕ್ಕಾಗಿ ಶಾಲಾ ಹಂತದಿAದಲೇ ನಿರಂತರ ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಕಾರ್ಯಯೋಜನೆ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
 ಡಯಟ್ (ಆIಇಖಿ) ಹಾಗೂ ಇತರೆ ಉಸ್ತುವಾರಿ ಅಧಿಕಾರಿಗಳು ಕಳೆದ ಒಂದು ವಾರದಲ್ಲಿ ಎಲ್ಲಾ ವಿಷಯಗಳ ವಿದ್ಯಾರ್ಥಿಗಳ ಮನೆಗೆಲಸವನ್ನು ಪರಿಶೀಲಿಸಬೇಕು. ಎಲ್ಲಾ ನೋಡಲ್ ಅಧಿಕಾರಿಗಳು ಪ್ರತಿ ವಾರ ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಬೇಕು. ಪ್ರತಿ ೧೫ ದಿನಗಳಿಗೊಮ್ಮೆ ಘಟಕ ಪರೀಕ್ಷೆ ನಡೆಸಬೇಕು. ಈ ಪರೀಕ್ಷೆಗಳ ಫಲಿತಾಂಶ ಹಾಗೂ ಪ್ರಗತಿಯನ್ನು ತಾವು ಖುದ್ದಾಗಿ ಪರಿಶೀಲಿಸುವುದಾಗಿ ತಿಳಿಸಿದರು.

ಪ್ರಗತಿ ಪರಿಶೀಲನೆಗಾಗಿ ಪ್ರತಿ ತಿಂಗಳ ಮೊದಲನೇ ವಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಎರಡನೇ ವಾರದಲ್ಲಿ ನೋಡಲ್ ಅಧಿಕಾರಿಗಳ ಸಭೆ ನಡೆಸಬೇಕು.
   ಪ್ರತಿದಿನ ಎರಡು ವಿಷಯಗಳಿಗೆ ಮನೆಗೆಲಸ ನೀಡಬೇಕು. ಇದರಲ್ಲಿ ಒಂದು ಭಾಷಾ ವಿಷಯ ಹಾಗೂ ಮತ್ತೊಂದು ಮುಖ್ಯ (ಕೋರ್) ವಿಷಯವಾಗಿರಬೇಕು. ಪ್ರತಿ ವಿಷಯಕ್ಕೆ ಮೂರು ಪ್ರಶ್ನೆಗಳಂತೆ ದಿನಕ್ಕೆ ಒಟ್ಟು ಆರು ಪ್ರಶ್ನೆಗಳನ್ನು ನೀಡಬೇಕು. ಇದರಲ್ಲಿ ಒಂದು ಪ್ರಶ್ನೆಯನ್ನು ಪ್ರಸ್ತುತ ಬೋಧಿಸುತ್ತಿರುವ ಪಾಠದಿಂದ ಹಾಗೂ ಎರಡು ಪ್ರಶ್ನೆಗಳನ್ನು ಹಿಂದಿನ ಪಾಸಿಂಗ್ ಪ್ಯಾಕೇಜ್‌ನಿಂದ ಆಯ್ಕೆ ಮಾಡಬೇಕು ಎಂದು ಸೂಚಿಸಿದರು.
ಎಸ್.ಎ.-೧ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಮುಖ್ಯ ಶಿಕ್ಷಕರು ಮನೆಗೆಲಸ ಹಾಗೂ ಪರಿಹಾರ ಬೋಧನಾ ತರಗತಿಗಳಿಗೆ ಸೂಕ್ತ ವೇಳಾಪಟ್ಟಿ ಮತ್ತು ಕಾರ್ಯಯೋಜನೆ ಸಿದ್ಧಪಡಿಸಬೇಕು. ಡಿಸೆಂಬರ್ ತಿಂಗಳ ಅಂತ್ಯದೊಳಗೆ ಸಂಪೂರ್ಣ ಪಠ್ಯಕ್ರಮವನ್ನು ಪೂರ್ಣಗೊಳಿಸಬೇಕು ಎಂದರು.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ಸೂಚಿಸಿದರು. ೬೦ ರಿಂದ ೧೦೦ ವಿದ್ಯಾರ್ಥಿಗಳಿರುವ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಇಂತಹ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ನೋಡಲ್ ಅಧಿಕಾರಿಗಳಾಗಿರುತ್ತಾರೆ. ೧೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಉಪನಿರ್ದೇಶಕರು (ಆಡಳಿತ) ಹಾಗೂ ಡಯಟ್ ಅಧಿಕಾರಿಗಳು ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಕಡಿಮೆ ವಿದ್ಯಾರ್ಥಿಗಳಿರುವ ಹಾಗೂ ಫಲಿತಾಂಶ ಕುಸಿತ ಕಂಡಿರುವ ಶಾಲೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ೬೦ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದು, ಕಳೆದ ಸಾಲಿನ ಮೊದಲ ಪರೀಕ್ಷೆಯಲ್ಲಿ ಶೇ.೭೫ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಿಗೆ ವಿಶೇಷ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ, ಕಲಿಕಾ ಪ್ರಗತಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.

ಇದಲ್ಲದೆ, ಮುಖ್ಯ ಶಿಕ್ಷಕರು ಪ್ರತಿ ವಾರ ಶಾಲಾ ಹಂತದಲ್ಲಿ ಸಭೆ ನಡೆಸಿ, ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಮನೆಗೆಲಸ ಹಾಗೂ ಪರಿಹಾರ ಬೋಧನಾ ತರಗತಿಗಳ ಅನುಷ್ಠಾನದ ಕುರಿತು ಚರ್ಚಿಸಬೇಕು.
ಸಭೆಯ ವರದಿಯನ್ನು ಸಂಬAಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತೆ ರಿತಿಕಾ ವರ್ಮ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶಂಕ್ರಮ್ಮ ಡವಳಗಿ (ಆಡಳಿತ), ಡಯಟ್ ಪ್ರಾಂಶುಪಾಲರು, ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರು, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿಗಳು ಮತ್ತು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.