
ಕಲಬುರಗಿ:ಮೇ.13: ನಗರದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಹಾಗೂ ಮಹೇಂದ್ರ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಂಗಳವಾರ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ನಗರದ ಸ್ಟೇಷನ್ ಬಜಾರ್‍ನಲ್ಲಿರುವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರಾದ ಸುರೇಶ್ ಅಕ್ಕಣ್ಣ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು ಹಾಗೂ ಗುರಿ ಹೊಂದಿದ ಅಧ್ಯಯನದ ಮೂಲಕ ಉತ್ತಮ ಸಾಧನೆ ಮಾಡಬೇಕು. ಶಿಕ್ಷಣವೇ ಜೀವನದಲ್ಲಿ ಯಶಸ್ಸಿಗೆ ಪ್ರಮುಖ ಅಸ್ತ್ರವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಗುರಿಗಳನ್ನು ಸಾಧಿಸಬೇಕು,” ಎಂದು ಹೇಳಿದರು.
ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ್ ಜಮಖಂಡಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ್ ಫಿರೋಜಾಬಾದ್ ಹಾಗೂ ವರದಿಗಾರ ಚಂದ್ರು ಹಿರೇಮಠ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸುಜಾತಾ ಎಸ್. ಬಿರಾದಾರ ವಹಿಸಿದ್ದರು. ಎನ್‍ಎಸ್‍ಎಸ್ ವಿಭಾಗೀಯ ಅಧಿಕಾರಿ ಡಾ. ಚಂದ್ರಶೇಖರ್ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಹಾಗೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಮಿಲಿಂದ್ ಪ್ರಶಾಂತ್, ಶಿವಾ, ಗೌತಮ್ ಶಿವಲಿಂಗ, ಪ್ರಜ್ವಲ್ ಸೇರಿದಂತೆ ಹಲವು ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆಗಳ ಮುಖ್ಯಗುರುಗಳಾದ ರಮೇಶ್ ಕುಮಾರ್ ವಿ. ದೇವಣಿ, ರಾಜಕುಮಾರ್ ಪಾಟೀಲ್, ಅಂಜನಾದೇವಿ ಹಾಗೂ ಚನ್ನವೀರಯ್ಯ ಡಿ. ಹಿರೇಮಠ್ ಅವರನ್ನು ಗೌರವಿಸಲಾಯಿತು.
ಎನ್‍ಎಸ್‍ಎಸ್ ನೋಡಲ್ ಅಧಿಕಾರಿ ಪಾಂಡು ಎಲ್. ರಾಠೋಡ್ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಚಿಕ್ಕಮೇಟಿ ಸ್ವಾಗತಿಸಿದರು. ಶ್ರೀಶೈಲ್ ಕೂರ್ದ್ ವಂದಿಸಿದರು.
ಮಹೇಂದ್ರ ಫೌಂಡೇಷನ್ ಅಧ್ಯಕ್ಷರಾದ ಜ್ಯೋತಿ ಚಂದ್ರಶೇಖರ್ ದೊಡ್ಡಮನಿ, ಉಪನ್ಯಾಸಕರಾದ ಬಲರಾಮ ಚವ್ಹಾಣ, ಅಲ್ಲಾಪಟೇಲ್, ಅನಿಲ್ ಸುಗಂಧಿ, ಡಾ. ಶರಣಬಸಪ್ಪ ಮಹಾಜನ್, ಡಾ. ಶೀಲಾವತಿ ವಾಡೇಕರ್, ಸಿದ್ದಲಿಂಗಪ್ಪ ಪೂಜಾರಿ, ಶಶಿಧರ್ ಭೂಸನೂರ, ಮಹಿಬೂಬ್ ನದಾಫ್, ಪಲ್ಲವಿ ಕುಲಕರ್ಣಿ ಹಾಗೂ ಸಿಬ್ಬಂದಿಗಳಾದ ನೇಸರ ಬಿಳಗೀಮಠ, ಮಲ್ಲಪ್ಪ, ಲಕ್ಷ್ಮಿಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.























