
ಆಳಂದ:ಮೇ.13: ಗ್ರಾಮೀಣ ಜನತೆಯ ಕಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಕಡಗಂಚಿ ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಎರಡು ಕಡೆ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಯಿತು.
ಭೂಸ್ನೂರ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಮಟ್ಟನ್ನ ಬಿಳಗಿ ಅವರು ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿದರು. ಈ ಶಿಬಿರದಲ್ಲಿ 87 ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಕಣ್ಣಿನ ಪೆÇರೆ ಇರುವ 18 ರೋಗಿಗಳನ್ನು ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಕಾರ್ಯಕ್ರಮದಲ್ಲಿ ನೇತ್ರ ತಜ್ಞ ಡಾ. ಕೆ. ರಾಹುಲ್, ದತ್ತ್, ಜಗದೀಶ್, ಗ್ರಾಮ ಕಾರ್ಯದರ್ಶಿ ಶಿವರಾಯ ಅವ್ರಾದಿ, ಸಿ.ಹೆಚ್.ಒ. ವಿಶ್ವನಾಥ, ಪಿ.ಹೆಚ್.ಸಿ.ಒ. ಮಹಾನಂದ, ಪ್ರಕಾಶ್, ಮಿಸ್. ಜಯಶೀಲ, ಥೋಮಸ್ ಮತ್ತು ಇತರರು ಭಾಗವಹಿಸಿದ್ದರು.
ಅಲ್ಲದೆ, ಕಡಗಂಚಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರದಲ್ಲಿ ಅನೇಕ ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡು ಸೇವೆಯ ಸದ್ಬಳಕೆ ಮಾಡಿಕೊಂಡರು. ಇಲ್ಲಿ 10 ಜನರಿಗೆ ಕಣ್ಣಿನ ಪೆÇರೆ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ಕಾರ್ಯದರ್ಶಿ ಫಾ. ವಿಲಿಯಂ ಮಿರಾಂದ, ಅನುಗ್ರಹ ಆಸ್ಪತ್ರೆ ಸಿಬ್ಬಂದಿ ಶ್ರೀ ದತ್ತ, ಕುಮಾರ್, ಆರೋಗ್ಯ ಕೇಂದ್ರದ ಶ್ರೀ ನೀಲಕಂಠ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಈ ಶಿಬಿರಗಳು ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸುವ ಮೂಲಕ ಅಂಧತ್ವ ನಿವಾರಣೆಯ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿವೆ ಎಂದು ಆಯೋಜಕರು ತಿಳಿಸಿದ್ದಾರೆ.





















