Home ಜಿಲ್ಲೆ ವಿದ್ಯಾರ್ಥಿಗಳು ಪರಿಶ್ರಮದಿಂದ ಗುರಿ ಸಾಧಿಸಬೇಕು: ಶರಣಪ್ಪ ಮಾನೇಗಾರ À

ವಿದ್ಯಾರ್ಥಿಗಳು ಪರಿಶ್ರಮದಿಂದ ಗುರಿ ಸಾಧಿಸಬೇಕು: ಶರಣಪ್ಪ ಮಾನೇಗಾರ À

ಯಾದಗಿರಿ:ಮಾ.೧೭:ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿಗಳನ್ನು ಹೊಂದಿಕೊAಡು ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ತಮ್ಮದಾಗುತ್ತದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಯರಗೋಳ ಹೇಳಿದರು.

ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾಭ್ಯಾಸವು ಜೀವನದ ಅತ್ಯಂತ ಮಹತ್ವದ ಹಂತವಾಗಿದ್ದು, ವಿದ್ಯಾರ್ಥಿಗಳು ಸಮಯವನ್ನು ಸರಿಯಾಗಿ ಬಳಸಿಕೊಂಡು ತಮ್ಮ ಗುರಿ ಸಾಧನೆಗೆ ಶ್ರಮಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ಅತ್ಯಗತ್ಯ. ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಕಠಿಣ ಪರಿಶ್ರಮ ಮಾಡಿದರೆ ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಲು ಸಾಧ್ಯ. ಬಡತನ ಅಥವಾ ಪ್ರತಿಕೂಲ ಪರಿಸ್ಥಿತಿಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ. ಸಂಕಲ್ಪ ಮತ್ತು ಶ್ರಮ ಇದ್ದರೆ ಜೀವನದಲ್ಲಿ ಯಶಸ್ಸು ಖಚಿತ ಎಂದು ಅವರು ಹೇಳಿದರು.

ಶಿಕ್ಷಣವು ಕೇವಲ ಪುಸ್ತಕ ಜ್ಞಾನಕ್ಕೆ ಸೀಮಿತವಾಗದೆ, ವ್ಯಕ್ತಿತ್ವ ನಿರ್ಮಾಣಕ್ಕೂ ದಾರಿ ತೋರಬೇಕು. ವಿದ್ಯಾರ್ಥಿಗಳು ಶಿಸ್ತು, ಸದ್ಗುಣ ಮತ್ತು ಉತ್ತಮ ಚಿಂತನೆಗಳನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಸಮಾಜಕ್ಕೆ ಸೇವೆ ಸಲ್ಲಿಸಬಹುದು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸರ್ವೋದಯ ಶಾಲೆ ಮತ್ತು ಪ್ರಿಯಾಂಕ ಪ್ರೌಢಶಾಲೆಯ ದಶಮ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ಬಾಬುರಾವ್ ಚವ್ಹಾಣ್, ಎಸ್‌ಡಿಎಂಸಿ ಅಧ್ಯಕ್ಷ ಚನ್ನಬಸಪ್ಪ ಜೋಗಿ, ಶಿಕ್ಷಕರಾದ ಚನ್ನಬಸಪ್ಪ ಗೋಡಿಕಾರ್, ನಾಜಿಯಾ, ಶೈಲಜಾ, ರೇಣುಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗ್ರಾಮಸ್ಥರಾದ ಲಕ್ಷ್ಮೀಕಾಂತ್ ಗೋಡಿಕಾರ್, ನಾಗರೆಡ್ಡಿ ಬಾನರ್, ಹನಮಂತ ದೊಡ್ಡಮನಿ, ಬನ್ನಪ್ಪ ಹುಲಿಬೆಟ್ಟ, ಆಂಜನೇಯ ಕಟ್ಟಿಮನಿ, ಚನ್ನಬಸವ** ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.