
ಕಲಬುರಗಿ,ಫೆ.7-ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕಿನಿಂದ 5 ಲಕ್ಷ ರೂ.ಡ್ರಾ ಮಾಡಿಕೊಂಡು ಇಲ್ಲಿನ ಜಯದೇವ ಆಸ್ಪತ್ರೆಯ ಸ್ಟಾಫ್‍ನರ್ಸ್ ಒಬ್ಬರಿಗೆ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್‍ನರ್ಸ್ ಆಗಿರುವ ಪದ್ಮಾ ಗೌತಮ್ ಮಂದೇವಾಲ್ ಎಂಬುವವರೆ ವಂಚನೆಗೆ ಒಳಗಾಗಿದ್ದು, ಅವರು ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್‍ನರ್ಸ್ ಆಗಿರುವ ಪದ್ಮಾ ಮಂದೇವಾಲ್ ಅವರು ಲಕ್ಷ್ಮೀ ನಗರದ ನಿವಾಸಿಯಾಗಿದ್ದು, ಗಂಜ್ ಏರಿಯಾದಲ್ಲಿರುವ ಕೆನರಾ ಬ್ಯಾಂಕ್‍ನಲ್ಲಿ ಇವರ ಸಂಬಳ ಜಮೆಯಾಗುತ್ತದೆ. ಇವರ ಬ್ಯಾಂಕ್ ಖಾತೆಯಲ್ಲಿ 5,28,539 ರೂ.ಜಮೆ ಇದ್ದವೆನ್ನಲಾಗಿದ್ದು, ಜ.12 ರಂದು ಇವರ ಬ್ಯಾಂಕ್ ಖಾತೆಯಿಂದ 5 ಲಕ್ಷ ರೂ.ಡ್ರಾ ಆಗಿರುವುದು ಅವರ ಗಮನಕ್ಕೆ ಬಂದು ಬ್ಯಾಂಕಿಗೆ ಹೋಗಿ ವಿಚಾರಿಸಿದ್ದಾರೆ. ಆಗ ಬ್ಯಾಂಕ್ ಸಿಬ್ಬಂದಿ ಮುಖಕ್ಕೆ ಮಾಸ್ಕ್ ಧರಿಸಿದ್ದ 25 ರಿಂದ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಬಂದಿದ್ದು, 5 ಲಕ್ಷ ಹಣ ಮೌಲ್ಯ ಬರೆದ ಅದರ ಕೆಳಗಡೆ ಮತ್ತು ಹಿಂಭಾಗದಲ್ಲಿ ರುಜು ಮಾಡಿದ ಚೆಕ್ ಕೊಟ್ಟಿದ್ದು, ಅದನ್ನು ಪರಿಶೀಲಿಸಿದಾಗ ಖಾತೆಯ ದಾಖಲಾತಿಯಲ್ಲಿರುವ ರುಜು ಮತ್ತು ಚೆಕ್ ಮೇಲೆ ಇರುವ ರುಜು ಹೊಂದಾಣಿಕೆಯಾಗಿದ್ದರಿಂದ ಆತನ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಪಡೆದು ಹಣ ಡ್ರಾ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
ನನ್ನ ಚೆಕ್ ಕಳ್ಳತನ ಮಾಡಿ ಖಾತೆಯಿಂದ 5 ಲಕ್ಷ ರೂ. ಡ್ರಾ ಮಾಡಿಕೊಂಡರೂ ಈ ಬಗ್ಗೆ ಮಾಹಿತಿ ನೀಡದೇ ಇರುವ ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಚೆಕ್ ಕಳ್ಳತನ ಮಾಡಿ ಹಣ ಡ್ರಾ ಮಾಡಿಕೊಂಡ ವ್ಯಕ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪದ್ಮಾ ಮಂದೇವಾಲ್ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.























