Home ಜಿಲ್ಲೆ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ “ಸೃಜನ” ಉತ್ತಮ ವೇದಿಕೆ : ಪ್ರೊ. ಬಸವರಾಜ ಪದ್ಮಶಾಲಿ

ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ “ಸೃಜನ” ಉತ್ತಮ ವೇದಿಕೆ : ಪ್ರೊ. ಬಸವರಾಜ ಪದ್ಮಶಾಲಿ

ಅಥಣಿ: ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಮಥ್ರ್ಯ ಮತ್ತು ಪ್ರತಿಭೆಯನ್ನು ಅವಕಾಶ ಸಿಕ್ಕ ವೇದಿಕೆಗಳಲ್ಲಿ ಪ್ರದರ್ಶನ ಮಾಡುವ ಮೂಲಕ ಸಾಧಕರಾಗಿ ಹೊರಹೊಮ್ಮಬೇಕು. ಗುರುವಿನ ಮಾರ್ಗದರ್ಶನದಲ್ಲಿ ಗುರಿ ಸಾಧಿಸುವ ಮೂಲಕ ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಬೇಕು ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪನ್ಯಾಸಕ ಬಸವರಾಜ ಪದ್ಮಶಾಲಿ ಹೇಳಿದರು.
ಅವರು ಅಥಣಿ ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ನಾಲ್ಕನೇ ವರ್ಷದ ಸೃಜನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಹೊಂದಿಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಕೀಳರೀಮೆಯನ್ನು ಬಿಟ್ಟು, ಆತ್ಮವಿಶ್ವಾಸದಿಂದ ಹೊಸತನವನ್ನು ಅಧ್ಯಯನ ಮಾಡಬೇಕು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅನೇಕ ಜನರು ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ. ನಮ್ಮಲ್ಲಿರುವ ಜ್ಞಾನಕ್ಕೆ ಸ್ವಲ್ಪ ಯೋಚನೆಯನ್ನು ಬಳಸಿ ಏನಾದರೂ ಹೊಸತನವನ್ನು ಸೃಷ್ಟಿಸುವ ನನ್ನತನ ಕಲಿಯಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು, ವೈಜ್ಞಾನಿಕ ಮನೋಭಾವವನ್ನು ಸಾಬೀತಪಡಿಸಲು ಸೃಜನ್ ಎಂಬ ಕಾರ್ಯಕ್ರಮದ ಮೂಲಕ ಒಳ್ಳೆಯ ವೇದಿಕೆಯನ್ನು ಈ ಮಹಾ ವಿದ್ಯಾಲಯದವರು ಒದಗಿಸಿ ಕೊಟ್ಟಿದ್ದಾರೆ. ತಾಲೂಕಿನ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮಲ್ಲಿರುವ ಸೃಜನಾತ್ಮಕ ಚಟುವಟಿಕೆಗಳನ್ನು ಪ್ರದರ್ಶನ ಮಾಡಬೇಕು. ಕಲಿಸಿದ ಗುರುಗಳು ಮತ್ತು ಹೆತ್ತ ತಂದೆ-ತಾಯಿ ತಮ್ಮ ಮಕ್ಕಳ ಬಗ್ಗೆ ಅಪಾರವಾದ ಕನಸು ಹೊಂದಿರುತ್ತಾರೆ. ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ತಾವು ನಡೆದುಕೊಳ್ಳದೆ ಅವರನ್ನ ಖುಷಿ ಪಡಿಸುವ ನಿಟ್ಟಿನಲ್ಲಿ ನಿರಂತರ ಅಧ್ಯಯನ ಮಾಡಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಮಲ್ಲಿಕಾರ್ಜುನ ಹಂಜಿ ಮಾತನಾಡಿ ಸೃಜನ ವೇದಿಕೆಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸೃಜನಾತ್ಮಕ ಅಭಿವೃದ್ಧಿಗೆ ಪೂರಕ ಎಂದು ಹೇಳುತ್ತಾ ಗ್ರಾಮೀಣ ಪ್ರದೇಶದ ಆಹಾರ ಪದ್ಧತಿಯಲ್ಲಿ ವೈಜ್ಞಾನಿಕ ಸತ್ವಗಳಿವೆ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಹೊಸ ವಿಚಾರಗಳನ್ನು ಬೆಳೆಸುತ್ತದೆ ಎಂದರು.
ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರೇಷ್ಮಾ ಇನಾಮದಾರ ಪ್ರಸ್ತಾವಿಕವಾಗಿ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿನ ಸೃಜನಾತ್ಮಕ ಬೆಳವಣಿಗೆಯನ್ನ ಗುರುತಿಸಲು ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ, ವಿಭಿನ್ನ ವಿಭಾಗಗಳಿಂದ ವಿವಿಧ ಸೃಜನಾತ್ಮಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ವಿಜ್ಞಾನ ವಿಭಾಗದಿಂದ ವಿಜ್ಞಾನೋತ್ಸವ, ಕಲಾ ವಿಭಾಗದಿಂದ ನೃತ್ಯೋತ್ಸವ ಹಾಗೂ ವಾಣಿಜ್ಯ ವಿಭಾಗದಿಂದ ಖಾದ್ಯೋತ್ಸವ ಆಯೋಜಿಸಲಾಗಿದೆ. ತಾಲೂಕಿನ 60 ಕ್ಕೂ ಅಧಿಕ ಶಾಲೆ ಮತ್ತು ಕಾಲೇಜುಗಳಿಂದ ಸು. 900 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪತ್ರಕರ್ತ ಸಿದ್ದರಾಜ ಗಾಲಿ, ಹಾಗೂ ರಾಜ್ಯ ಮಟ್ಟದ ಅಣುಕು ಸಂಸತ್ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿನಿ ಸುಕನ್ಯಾ ಗೊಂಧಳಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಶಂಭುಲಿಂಗ ಮಮದಾಪುರ, ವಿಜಯ ಬುರ್ಲಿ, ಪದವಿ ವಿಭಾಗದ ಪ್ರಾಚಾರ್ಯ ಡಾ. ಪ್ರಶಾಂತ್ ಮಗದುಮ, ಕನ್ನಡಪರ ಹೋರಾಟಗಾರ ಅಣ್ಣಾಸಾಬ ತೆಲಸಂಗ, ಐ. ಜಿ. ಮುಲ್ಲಾ, ಬಿ. ಅರ್, ರಾಠೋಡ ಉಪಸ್ಥಿತರಿದ್ದರು. ಡಾ. ಪ್ರಶಾಂತ್ ಮಗದುಮ ಸ್ವಾಗತಿಸಿದರು.
ಪೂರ್ಣಿಮಾ ಮಿಣಚೆ ಮತ್ತು ಎಸ್ .ಡಿ.ಕೋಳಿ ನಿರೂಪಿಸಿದರು. ಜಯಣ್ಣ.ಎನ್.ಡಿ ಪರಿಚಯಿಸಿದರು. ಐ.ಜಿ.ಮುಲ್ಲಾ ವಂದಿಸಿದರು.


ಗ್ರಾಮೀಣ ಪ್ರದೇಶದ ಆಹಾರ ಪದ್ಧತಿಯಲ್ಲಿ ವೈಜ್ಞಾನಿಕ ಸತ್ವಗಳಿವೆ, ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಪದ್ಧತಿಯನ್ನು ರೂಡಿಸಿಕೊಳ್ಳಬೇಕು. ಶಿಕ್ಷಣ ಪಡೆದ ನಂತರ ನಿರುದ್ಯೋಗಿಯಾಗದೇ ಸ್ವಂತ ಉದ್ಯೋಗಗಳನ್ನು ಕೈಕೊಂಡು ಕುಟುಂಬ ನಿರ್ವಹಣೆ ಜೊತೆಗೆ ಆರ್ಥಿಕವಾಗಿ ಸಬಲೀಕರಣ ಹೊಂದಲು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಹೊಸ ವಿಚಾರಗಳನ್ನು ಬೆಳೆಸುತ್ತದೆ.

  • ಡಾ. ಮಲ್ಲಿಕಾರ್ಜುನ ಹಂಜಿ,
    ಹಿರಿಯ ವೈದ್ಯರು, ಅಥಣಿ.