
ಬೀದರ: ಮೇ.22:ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಆದರ್ಶ ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಲೋಕಸಭಾ ಸದಸ್ಯ ಸಾಗರ ಖಂಡ್ರೆ ತಿಳಿಸಿದರು. ಭಾಲ್ಕಿ ತಾಲೂಕಿನ ಬಾಳೂರ ಗ್ರಾಮದಲ್ಲಿ ಗ್ರಾಮಸ್ಥರ ವತಿಯಿಂದ ಆಯೋಜಿಸಿದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು. ಪ್ರತಿಯೊಬ್ಬರೂ ತಾಯಿಗೆ ಗೌರವ ಕೊಡಬೇಕು. ಶಿವಾಜಿಯವರ ಜೀವನ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಅಲ್ಲದೇ ಈಗಾಗಲೇ ಜಿಲ್ಲೆಯಲ್ಲಿ 25 ಲಕ್ಷ ವೆಚ್ಚದಲ್ಲಿ ಮರಾಠಾ ಭವನ ಕಾಮಗಾರಿ ಆರಂಭಿಸಲಾಗಿದೆ. ಬೀದರ ನಾಂದೇಡ ರೈಲ್ವೆ ಕಾಮಗಾರಿಗೆ ರಾಜ್ಯ ಸರ್ಕಾರದ ಪಾಲಿನ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮರಾಠಾ ಸಮುದಾಯದ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತುವೆ. ಜೊತೆಗೆ ಮರಾಠಾ ಸಮಾಜದ ಏನೇ ಸಮಸ್ಯೆಗಳಿದ್ದರೂ ಅವುಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ಬೆಂಗಳೂರಿನ ಪೂಜ್ಯ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ ಶಿವಾಜಿ ಮಹಾರಾಜರ ನಡೆದಾಡುವ ವಿಶ್ವವಿದ್ಯಾಲಯವಾಗಿದ್ದರು ಎಂದು ಡಾ. ಬಾಬಾ ಸಾಹೇಬರು ಹೇಳಿದ್ದರು. ಕೇವಲ ಮೂರ್ತಿ ಸ್ಥಾಪನೆ ಮಾಡಿದರೆ ಸಲ್ಲದು ಅದರ ಜೊತೆಗೆ ಸಮಾಜದ ಏಳ್ಗೆಗೆ ಶ್ರಮಿಸಬೇಕೆಂದು ಸಮಾಜದ ಬಾಂಧವರಿಗೆ ಕರೆ ನೀಡಿದರು. ಶಿವಾಜಿ ಮಹಾರಾಜರು ಜನಿಸಿ 396 ವರ್ಷಗಳು ಕಳೆದರೂ ಇಂದಿಗೂ ಹಳ್ಳಿ ಹಳ್ಳಿಗಳಲ್ಲಿ ಅವರ ಪುತ್ಥಳಿ ಸ್ಥಾಪನೆಯಾಗುತ್ತಿವೆ ಎಂದರೆ ಅವರ ಹೋರಾಟದ ಮಾದರಿ ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿದಿವೆ ಎಂದರು.
ಪುಣೆಯ ಪೂಜ್ಯ ಶ್ರೀ ದಾದಾ ಮಹಾರಾಜ್ ನಗರಕರ್ ಮಾತನಾಡಿ ಬೀದರ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕು. ಈ ಕುರಿತು ರಾಜ್ಯದ ಅರಣ್ಯ ಜೀವಿಶಾಸ್ತ್ರ ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ವಿಧಾನಸಭೆಯಲ್ಲಿ ಧ್ವನಿ ಎತ್ತಲಿ ಎಂದು ತಿಳಿಸಿದರು.
ಬೀದರ ಚಿದಂಬರ ಆಶ್ರಮದ ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಜಾತಿ ವ್ಯವಸ್ಥೆಯೇ ನಮ್ಮ ದೇಶವನ್ನು ಹಾಳು ಮಾಡಿದೆ. ಸ್ವಾರ್ಥಕ್ಕಾಗಿ ಜನಪ್ರತಿನಿಧಿಗಳು ಒಡೆದಾಳುವ ನೀತಿ ಅನುಸರಿಸುವುದು ಸಲ್ಲದು. ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಜೀವಿಸುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿದ್ದಾರೆ ಎಂದು ಪ್ರತಿಪಾದಿಸಿದರು.
ಸಮಾಜದ ಮುಖಂಡರಾದ ಪದ್ಮಾಕರ ಪಾಟೀಲ ಮಾತನಾಡಿ ಶಿವಾಜಿ ಮಹಾರಾಜರು ಕೇವಲ ಮರಾಠರಿಗೆ ಸೀಮಿತವಲ್ಲ. ಅವರು ಇಡೀ ದೇಶದ ಜನತೆಯ ಸ್ವಾಭಿಮಾನದ ಸಂಕೇತವಾಗಿದ್ದಾರೆ ಎಂದು ತಿಳಿಸಿದರು. ಸಾಗರ ಖಂಡ್ರೆಯವರು ಮರಾಠಾ ಸಮಾಜದ ಕೈಹಿಡಿದರೆ ನಾವು ಅವರನ್ನು ನಿರಂತರವಾಗಿ ಕೈಹಿಡಿಯುತ್ತೇವೆ. ಮರಾಠರಿಗೆ ರಾಜಕೀಯ ಸ್ಥಾನಮಾನ ಸಿಗಬೇಕು. ಬಡತನ ತೊಲಗಬೇಕು. ಸಮಾಜದಲ್ಲಿ ಐಕ್ಯತೆ ಮೂಡಬೇಕೆಂದು ತಿಳಿಸಿದರು.
ವೇದಿಕೆ ಮೇಲೆ ಶಿವಚರಿತ್ರೆಕಾರರಾದ ಪ್ರೇರಣಾತಾಯಿ ತೋರಣಾ, ಎಂಎಲ್ಸಿ ಎಂಜಿ ಮುಳೆ, ಕಾರ್ಯಕ್ರಮದ ಅಧ್ಯಕ್ಷರಾದ ಖಂಡೋಬಾ ಕೊಂಡಿಬಾರಾವ ಶಿಂಧೆ, ಉಪಾಧ್ಯಕ್ಷ ಪಂಡಿತ್ ಜಾಧವ್, ಮುಖಂಡರಾದ ಅಶೋಕರಾವ ಸೋಂಜೆ, ಹಣಮಂತರಾವ ಚವ್ಹಾಣ, ಸಂದೀಪ ತೇಲಗಾಂವಕರ್, ಕಿಶನರಾವ ಪಾಟೀಲ ಇಂಚೂರಕರ್, ಬಾಬುರಾವ ಕಾರಬಾರಿ, ಈಶ್ವರಸಿಂಗ್ ಠಾಕೂರ್, ಜನಾರ್ಧನ ಬಿರಾದಾರ, ದಿಗಂಬರ ಮಾನಕಾರಿ, ವೆಂಕಟರಾವ ಮಾಯಿಂದೆ, ನಾರಾಯಣ ಗಣೇಶ, ಬಲಭೀಮ ಥೋರಾತ್, ವೆಂಕಟರಾವ ಕುಲಕರ್ಣಿ, ಡಾ. ಸುಕಾನಂದ ಡಾವರಗಾಂವೆ, ಸಕಲ ಮರಾಠಾ ಸಮಾಜದ ಸಂಯೋಜಕ ಪ್ರದೀಪ ಬಿರಾದಾರ, ವಿನೋದ ಥೋರಾತ್, ಅಂಬಾದಾಸ ಸೇರಿದಂತೆ ಹಲವರಿದ್ದರು.






















