Home ಜಿಲ್ಲೆ ಕಲಬುರಗಿ ಸ್ವಚ್ಛತಾ ಸಂದೇಶ ಸಾರಿದ ಸತ್ಯ ಸಾಯಿ ವಿದ್ಯಾ ನಿಕೇತನಂ ವಿದ್ಯಾರ್ಥಿಗಳು

ಸ್ವಚ್ಛತಾ ಸಂದೇಶ ಸಾರಿದ ಸತ್ಯ ಸಾಯಿ ವಿದ್ಯಾ ನಿಕೇತನಂ ವಿದ್ಯಾರ್ಥಿಗಳು

ಕಮಲಾಪುರ: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಕಮಲಾಪುರದಲ್ಲಿ ಸ್ವಚ್ಛತಾ ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಸತ್ಯ ಸಾಯಿ ವಿದ್ಯಾ ನಿಕೇತನಂನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ಪ್ರಕೃತಿ ಯೋಗ ತರಬೇತಿ ಟ್ರಸ್ಟ್ನ ಸದಸ್ಯರು ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿ ಜಂಟಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮವು ಕಮಲಾಪುರದ ತಹಶೀಲ್ದಾರ್ ಕಚೇರಿಯಿಂದ ರೇವಸಿದ್ದೇಶ್ವರ ದೇವಸ್ಥಾನದವರೆಗೆ ನಡೆಯಿತು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿದ್ದ ತ್ಯಾಜ್ಯವನ್ನು ತೆರವುಗೊಳಿಸಿದರು. ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ನೀಡಲಾಯಿತು.

ಅಭಿಯಾನದ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಸ್ವಚ್ಛತೆ, ವೈಯಕ್ತಿಕ ನೈರ್ಮಲ್ಯ, ತ್ಯಾಜ್ಯ ವಿಂಗಡಣೆ ಮತ್ತು ಸೂಕ್ತ ವಿಲೇವಾರಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು. ವಿದ್ಯಾರ್ಥಿಗಳು ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ಯುವಜನತೆಯ ಪಾತ್ರವನ್ನು ಸಾರಿದರು.

ಪ್ರಕೃತಿ ಯೋಗ ತರಬೇತಿ ಟ್ರಸ್ಟ್ನ ಸದಸ್ಯರು ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿಯ ಸಹಕಾರದಿಂದ ನಡೆದ ಈ ಕಾರ್ಯಕ್ರಮದಲ್ಲಿ ಸತ್ಯ ಸಾಯಿ ವಿದ್ಯಾ ನಿಕೇತನಂನ ವಿದ್ಯಾರ್ಥಿಗಳೊಂದಿಗೆ ಯತೀಶ್, ಸಾಯಿಕುಮಾರ್ ಕಲ್ಲೂರ್, ಪಾರ್ಥಸಾರಥಿ, ಭಾನುಪ್ರಕಾಶ್, ಮಲ್ಲಿಕಾರ್ಜುನ, ತುಳಜಾಕುಮಾರ್, ಸಿದ್ದರಾಜ್ ಮೋಫಿಜ್,ಹಾಗೂ ಕಿರಣ್ ಸೇರಿದಂತೆ ಸಿಬ್ಬಂದಿ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಸ್ವಚ್ಛತಾ ಅಭಿಯಾನದ ಮೂಲಕ “ಸ್ವಚ್ಛ ಕಮಲಾಪುರ – ಆರೋಗ್ಯಕರ ಕಮಲಾಪುರ” ಎಂಬ ಸಂದೇಶವನ್ನು ಸಾರಲಾಯಿತು. ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಸಾರ್ವಜನಿಕರು ನಿರಂತರವಾಗಿ ಸಹಕರಿಸಬೇಕು ಎಂದು ಕಾರ್ಯಕ್ರಮದಲ್ಲಿ ಕರೆ ನೀಡಲಾಯಿತು.

ಸ್ವಚ್ಛ ಭಾರತ – ಸ್ವಸ್ಥ ಭಾರತ ಎಂಬ ಆಶಯದೊಂದಿಗೆ ನಡೆದ ಈ ಅಭಿಯಾನವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಸೇವಾ ಮನೋಭಾವ ಹಾಗೂ ಪರಿಸರದ ಬಗ್ಗೆ ಕಾಳಜಿಯನ್ನು ಬೆಳೆಸುವ ಮಹತ್ವದ ಪ್ರಯತ್ನವಾಯಿತು.