
ಚಿಕ್ಕಬಳ್ಳಾಪುರ. ಮಾ. ೧೮-ದಲಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಡುವ ಅನುದಾನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳಿಗೆ ವಿನಿಯೋಗಿಸಿ ದಲಿತರಿಗೆ ಮೋಸ ಮಾಡುತ್ತಿದ್ದು,ಈ ಕೂಡಲೇ ಗ್ಯಾರಂಟಿಗಳಿಗೆ ದಲಿತರ ಹಣ ಬಳಸುವುದಿಲ್ಲ ಎಂದು ಘೋಷಿಸದಿದ್ದಲ್ಲಿ ಎಲ್ಲ ದಲಿತ ಸಂಘಟನೆಗಳು ಒಗ್ಗೂಡಿ ಉಗ್ರ ಹೋರಾಟ ನಡೆಸುವುದಾಗಿ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಿಂಹಪಾಲು ಕೊಡುಗೆಯನ್ನು ನೀಡಿರುವ ದಲಿತ ಸಮುದಾಯದ ಬೆನ್ನುಮೂಳೆ ಮುರಿಯುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಕಳೆದ ೨೦೨೩-೨೪ ರಿಂದ ೨೦೨೫-೨೬ನೇ ಸಾಲಿನವರೆಗೆ ದಲಿತರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಬರೊಬ್ಬರಿ ೫೩,೦೫೯ ಕೋಟಿ ರೂಗಳನ್ನು ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡುವ ಮೂಲಕ ದಲಿತರ ಅಭಿವೃದ್ಧಿಗೆ ತೊಡುಕನ್ನುಂಟು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತದ ಬಜೆಟ್‌ನಲ್ಲಿ ದಲಿತ ಸಮುದಾಯಗಳಿಗೆ ಮೀಸಲಿಟ್ಟಿರುವ ೪೦ ಸಾವಿರ ಕೋಟಿ ರೂ.ಗಳಲ್ಲಿ ೧೩,೪೩೩.೪೮ ಕೋಟಿ ರೂಗಳನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡಿದೆ.ಸಾಲದೆಂಬಂತೆ ಗ್ಯಾರಂಟಿಗಳಿಗೆ ಬಳಕೆ ಮಾಡಿ ಉಳಿದ ಅನುದಾನದಲ್ಲಿಯೂ ಕೇವಲ ಶೇ.೨೫ ರಷ್ಟು ಮಾತ್ರ ಬಿಡುಗಡೆ ಮಾಡುವ ಮೂಲಕ ಸಮುದಾಯವನ್ನು ವ್ಯವಸ್ಥಿತವಾಗಿ ತುಳಿಯುವ ಕಾರ್ಯವನ್ನು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿದರು.
ತೋರ್ಪಡಿಕೆಗೆ ಸಾವಿರಾರು ಕೋಟಿ ರೂ. ದಲಿತರಿಗೆ ಮೀಸಲಿಟ್ಟಿರುವುದಾಗಿ ರಾಜ್ಯ ಸರ್ಕಾರವು ಸುಳ್ಳುಗಳನ್ನು ಹೇಳುವ ಮೂಲಕ ಇತರೆ ಸಮುದಾಯಗಳಿಗೆ ತಪ್ಪು ಸಂದೇಶ ರವಾನಿಸುತ್ತಿದೆ.ಆದರೆ ವಾಸ್ತವದಲ್ಲಿ ಅನುದಾನವಿಲ್ಲದೆ ಸಮುದಾಯಕ್ಕೆ ಸೇರಿದ ಅಂಬೇಡ್ಕರ್, ವಾಲ್ಮೀಕಿ ಸೇರಿ ಇತರೆ ನಿಗಮ ಮಂಡಳಿಗಳಿಂದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ.ಈ ನಿಟ್ಟಿನಲ್ಲಿ ಸರ್ಕಾರ ದಲಿತರಿಗೆ ನೀಡುವ ಅನುದಾನವನ್ನಷ್ಟೇ ಬಜೆಟ್‌ನಲ್ಲಿ ಘೋಷಣೆ ಮಾಡಲಿ ಎಂದು ನುಡಿದರು.
ಸರ್ಕಾರ ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಗ್ಯಾರೆಂಟಿಗಳಿಗೆ ದಲಿತ ಅನುದಾನ ಬಳಕೆ ಮಾಡುವುದಿಲ್ಲ ಎಂದು ಘೋಷಣೆ ಮಾಡಬೇಕು.ಅಲ್ಲದೆ ಸಂವಿಧಾನ ಎಲ್ಲರದ್ದೂ ಆಗಿದ್ದರೂ ಸಂವಿಧಾನ ರಕ್ಷಣೆ ಅಭಿಯಾನಕ್ಕೆ ಕೇವಲ ದಲಿತರ ಅನುದಾನ ಬಳಕೆ ಮಾಡುತ್ತಿರುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದ್ದು,ಈ ನಿಟ್ಟಿನಲ್ಲಿ ಖಜಾನೆಯಿಂದ ಹಣ ನೀಡಬೇಕು, ಗ್ಯಾರೆಂಟಿಗಳಿಗೆ ಬಳಕೆ ಮಾಡಿಕೊಂಡು ಅನುದಾನ ವಾಪಸ್ಸು ನೀಡಬೇಕು, ಎಸ್‌ಸಿ-ಎಸ್‌ಟಿ ನಿಗಮಗಳಿಗೆ ತಲಾ ೧೫೦೦ ಕೋಟಿ ನೀಡಬೇಕು ಕಾಲಂ ೭ಸಿ ರದ್ದುಗೊಳಿಸುವ ಕುರಿತು ಪ್ರಸ್ತಾಪ ಮಾಡಬೇಕೆಂದು ಆಗ್ರಹಿಸಿದರು.
ಇಲ್ಲವಾದರೆ ಎಲ್ಲ ದಲಿತ ಸಂಘಟನೆಗಳು ಒಗ್ಗೂಡಿ ಸಿಎಂ ಮನೆ ಮುತ್ತಿಗೆ, ವಿಧಾನಸೌಧ ಚಲೋ, ಸಚಿವರು ಹಾಗು ಶಾಸಕರಿಗೆ ಘೇರವ್ ಹಾಕುವುದು ಸೇರಿ ಉಗ್ರ ಹೋರಾಟಗಳನ್ನು ನಡೆಸುವುದಾಗಿ ಎಚ್ಚರಿಸಿದರು.
ಬಿ.ಎಚ್.ನರಸಿಂಹಪ್ಪ, ಹರಿಪ್ರಸಾದ್, ಪ್ರಕಾಶ್, ರಮೇಶ್, ಮಹೇಶ್, ಮುನಿರಾಜು, ವೇಣು, ನರಸಿಂಹ ಮೂರ್ತಿ ಇದ್ದರು.



























