
ಬೆಂಗಳೂರು,ಮಾ.೨೦-ಸೇವೆಯಿಂದ ಸಸ್ಪೆಂಡ್ ಆಗಿರುವ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ) ಕೆ.ರಾಮಚಂದ್ರ ರಾವ್ ಅವರು ಸಮವಸ್ತ್ರದಲ್ಲಿಯೇ ಕಚೇರಿಯಲ್ಲಿ ಮಹಿಳೆಯರ ಜೊತೆ ಸರಸವಾಡಿದ ವಿಡಿಯೋಗಳು ಸಂಪೂರ್ಣವಾಗಿ ಸತ್ಯ ಎನ್ನುವುದು ತನಿಖೆಯಲ್ಲಿ ಧೃಡಪಟ್ಟಿದೆ.
ಸರಸದ ವಿಡಿಯೋಗಳು ಡೀಪ್‌ಫೇಕ್, ಎಐ ನಿರ್ಮಿತ ಅಥವಾ ಯಾವುದೇ ರೀತಿಯಲ್ಲಿ ಎಟಿಟ್ ಆಗಿರುವ ದೃಶ್ಯಗಳಲ್ಲ ಎನ್ನುವುದು ತನಿಖೆಯಲ್ಲಿ ಸಾಬೀತಾಗಿದೆ.
ಸರಸದ ವಿಡಿಯೋಗಳು ವೈರಲ್ ಆಗಿರುವ ಸಂಬಂಧ ತನಿಖೆ ನಡೆಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಆರ್. ಹಿತೇಂದ್ರ ನೇತೃತ್ವದಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ ೪ ಮಂದಿ ಐಪಿಎಸ್ ಅಧಿಕಾರಿಗಳು ವಿಸ್ತೃತ ತನಿಖೆಯನ್ನು ಕೈಗೊಂಡು ನೀಡಿರುವ ೧೦೦ ಪುಟಗಳ ವರದಿಯಲ್ಲಿ ವಿಡಿಯೋಗಳ ಸತ್ಯಾಂಶ ಬಯಲಾಗಿದೆ.
ಮಹಿಳೆಯರು ನಾಪತ್ತೆ:
ಪ್ರಕರಣದಲ್ಲಿ ಬಹು ಮುಖ್ಯವಾದ ವಿಡಿಯೋದಲ್ಲಿರುವ ಇಬ್ಬರೂ ಮಹಿಳೆಯರು ಘಟನೆ ಬೆಳಕಿಗೆ ಬಂದ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ, ಆದರೆ ಮುಂದಿನ ತನಿಖೆಗೆ ಅವರ ಹೇಳಿಕೆ ಅತ್ಯಂತ ಪ್ರಮುಖವಾಗಿದ್ದು, ಅವರು ತನಿಖಾ ತಂಡದ ಮುಂದೆ ಹಾಜರಾಗಲೇಬೇಕಿದೆ.
ಮತ್ತೊಂದೆಡೆ ಹಿರಿಯ ಅಧಿಕಾರಿಗಳ ತಂಡದ ವರದಿ ಬಳಿಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್ ) ರಾವ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅಧಿಕೃತ ಇಲಾಖಾ ತನಿಖೆ ಪ್ರಾರಂಭವಾಗಿದೆ.
ಮೇ ೩೧ರಂದು ನಿವೃತ್ತಿ:
ಡಿಜಿಪಿ ರಾಮಚಂದ್ರರಾವ್ ಅವರು ಮೇ ೩೧ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ, ನಿವೃತ್ತಿ ಬಳಿಕವೂ ತನಿಖೆ ಮುಂದುವರಿದರೆ, ಅವರ ಪಿಂಚಣಿ ಇನ್ನಿತರ ನಿವೃತ್ತಿ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.
ಅಸಭ್ಯ ವರ್ತನೆ:
ಇಬ್ಬರು ಮಹಿಳೆಯರೊಂದಿಗೆ ಡಿಜಿಪಿ ರಾಮಚಂದ್ರ ರಾವ್ ಅಸಭ್ಯ ವರ್ತನೆ ನಡೆಸುತ್ತಿರುವ ದೃಶ್ಯಗಳು ೨೦೧೬-೧೭ರ ಅವಧಿಯಲ್ಲಿ ಬೆಳಗಾವಿ ವಲಯದ ಐಜಿಪಿ ಕಚೇರಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ವಿಡಿಯೋಗಳು ಹೊರಬಂದಾಗ, ರಾವ್ ಅವುಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದರು. ಅವು ಮಾರ್ಫ್ ಮಾಡಲ್ಪಟ್ಟಿದ್ದು, ಎಐ ಮೂಲಕ ಸೃಷ್ಟಿಸಲ್ಪಟ್ಟಿವೆ. ತಮ್ಮ ವಿರುದ್ಧ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಕೂಡ ಎಚ್ಚರಿಕೆ ನೀಡಿದ್ದರು. ಆದರೆ ಈಗ ಆ ವಿಡಿಯೋಗಳ ಅಸಲೀಯತ್ತು ಹೊರ ಬಂದಿರುವುದು ಅಮಾನತುಗೊಂಡಿರುವ ಡಿಜಿಪಿಗೆ ಸಂಕಷ್ಟ ತಂದಿದೆ.
ವರದಿಯ ಮುಖ್ಯಾಂಶ
- ವಿಡಿಯೋಗಳು ನೈಜತೆಯಿಂದ ಕೂಡಿದ್ದು, ಎಡಿಟ್ ಆಗಿಲ್ಲ ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್ ಎಸ್ ಎಲ್ ) ದೃಢೀಕರಣದಂತೆ ವಿಡಿಯೋಗಳಲ್ಲಿ ಯಾವುದೇ ಮಾರ್ಪಾಡಾಗಿಲ್ಲ ರಾವ್ ಅವರ ಬೆಳಗಾವಿ ಅವಧಿಯಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿ (ಚಾಲಕರು, ಕಚೇರಿ ಸಿಬ್ಬಂದಿ) ಮಹಿಳೆಯರನ್ನು ಗುರುತಿಸಿದ್ದು, ಅವರು ರಾವ್ ಅವರ ಖಾಸಗಿ ಕಚೇರಿಗೆ ಹಲವು ಬಾರಿ ಭೇಟಿ ನೀಡಿದ್ದನ್ನು ದೃಢಪಡಿಸಿದ್ದಾರೆ.
- ಮಹಿಳೆಯರಲ್ಲಿ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಈ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಚಿತ್ರೀಕರಿಸಿದ್ದಾರೆ






























