Home ಜಿಲ್ಲೆ ಕಲಬುರಗಿ ಜೀವ ಸಂಕುಲ ಉಳಿವಿಗೆ ಪರಿಸರ ರಕ್ಷಿಸಿ

ಜೀವ ಸಂಕುಲ ಉಳಿವಿಗೆ ಪರಿಸರ ರಕ್ಷಿಸಿ

ಜೇವರಗಿ,ಜೂ 7: ಅರಣ್ಯ ನಾಶ, ಗಣಿಗಾರಿಕೆ,ಕೈಗಾರಿಕೆಯಿಂದಾಗಿ ವಾತಾವರಣ ಹಾನಿಗೀಡಾಗುತ್ತಿದೆ. ಇದರಿಂದ ಪರಿಸರಕ್ಕೆ ಮಾತ್ರವಲ್ಲದೇ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಕಾರಣ ಪ್ರತಿಯೊಬ್ಬರೂ ಪರಿಸರ ಉಳಿಸಿ, ಬೆಳೆಸಿ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕಾಶೀನಾಥ್ ಉಪ್ಪಾರ ಹೇಳಿದರು.
ತಾಲ್ಲೂಕು ಕಾನೂನು ಸೇವೆಗಳ ಸಮಿತಿ ,ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರ ವಲಯ ಅರಣ್ಯಾಧಿಕಾರಿ ಪ್ರಿಯಾಂಕಾ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಸಹಾಯಕ ಅಭಿಯೋಜಕಿ ನಾಗವೇಣಿ ಧನ್ನಾ, ವಕೀಲರ ಸಂಘದ ಅಧ್ಯಕ್ಷ ಎಸ್.ಎ.ಪಾಟೀಲ, ಕಾರ್ಯದರ್ಶಿ ರಾಜಶೇಖರ ಶಿಲ್ಪಿ, ಉಪಾಧ್ಯಕ್ಷ ಭಾಷಾ ಪಟೇಲ್ ಯಾಳವಾರ, ಎಂ.ಸಿ.ಪೂಜಾರಿ, ಎಂ.ಐ.ಸೂಗೂರ, ಮುಖ್ಯಗುರು ರಮೇಶ ಜಾನಕರ್ ಇದ್ದರು. ವಕೀಲ ಅಪ್ಪಾಸಾಬ ಕೋಳಕೂರ ಉಪನ್ಯಾಸ ನೀಡಿದರು.