ಆನ್‌ಲೈನ್ ಗೇಮ್:ನಾಲ್ಕು ಬಲಿ

ಬೆಂಗಳೂರು,ಫೆ.೭- ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಮೂಲದ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದ ಸ್ಥಿತಿಯಲ್ಲಿ ಬಿಹಾರದ ನಳಂದ ಜಿಲ್ಲೆಯ ರಾಜಗೀರ್‌ನ ಧರ್ಮಶಾಲೆಯೊಂದರಲ್ಲಿ ನಿನ್ನೆ ಶವವಾಗಿ ಪತ್ತೆಯಾಗಿದ್ದಾರೆ.


ತಾಯಿ ಜಿ.ಆರ್.ಸುಮಂಗಲಾ (೭೮), ಮಗ ಜಿ.ಆರ್.ನಾಗಪ್ರಸಾದ್ (೫೦) ಹಾಗೂ ಅವರ ಇಬ್ಬರು ಪುತ್ರಿಯರಾದ ಜಿ.ಆರ್.ಶಿಲ್ಪಾ (೪೮) ಜಿ.ಆರ್.ಶ್ರುತಾ (೪೩) ಮೃತಪಟ್ಟವರು. ಸುಮಂಗಲಾ ರತ್ನಬಾಲ ರಾಜು ಎಂಬವರ ಪತ್ನಿ ಎಂದು ತಿಳಿದುಬಂದಿದೆ.


ಕೆಲ ತಿಂಗಳ ಹಿಂದೆ ಫ್ರೀಫೈರ್ ಗೇಮ್ ಅಡಿಕ್ಟ್ ಆಗಿದ್ದ ತನ್ನ ಅಕ್ಕನ ಮಗ ಅಮೋಘಕೀರ್ತಿಯನ್ನು ಕೊಲೆ ಮಾಡಿದ್ದ ಮಾವ ನಾಗಪ್ರಸಾದ್ ಸೇರಿ ನಾಲ್ವರು ಸಾವಿಗೆ ಶರಣಾಗಿದ್ದಾರೆ. ಬಾಲಕನ ಸಾವಿನ ಹಿನ್ನೆಲೆ ಮನನೊಂದಿದ್ದ ಕುಟುಂಬಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.


ಅಮೋಘ ಕೀರ್ತಿಯನ್ನು ಕೊಂದ ಪಾಪ ಪರಿಹಾರಕ್ಕೆ ಇಡೀ ಕುಟುಂಬ ಕೆಲ ತಿಂಗಳಿಂದ ದೇವಾಲಯಗಳಿಗೆ ಭೇಟಿ ನೀಡುತ್ತಿತ್ತು ಎಂದು ತಿಳಿದು ಬಂದಿದೆ. ಬಿಹಾರಕ್ಕೆ ಪ್ರವಾಸ ತೆರಳಿದ್ದ ನಾಗಪ್ರಸನ್ನ ಆತನ ತಾಯಿ ಸುಮಂಗಲಾ, ಸಹೋದರಿ ಶಿಲ್ಪಾ, ಶ್ರುತಾ ಎಲ್ಲರೂ ಒಮ್ಮೆಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಶರೀರಗಳ ಬಳಿ ನಿದ್ದೆ ಮಾತ್ರೆಗಳು ಸಿಕ್ಕಿದ್ದು, ಈ ಮಾತ್ರೆಗಳ ಓವರ್ ಡೋಸ್?ನಿಂದಲೇ ಕುಟುಂಬ ಮೃತಪಟ್ಟಿದೆ ಎನ್ನಲಾಗಿದೆ.


ಬಾಲಕನ ಸಾವಿಗೂ ೮ ತಿಂಗಳು ಮೊದಲಿನಿಂದ ಮಾವ ನಾಗಪ್ರಸಾದ್ ಜೊತೆಗೆ ವಾಸವಿದ್ದ. ಈ ವೇಳೆ ಮೊಬೈಲ್?ನಲ್ಲಿ ಫ್ರೀಫೈರ್ ಗೇಮ್??ಗೆ ಅಡಿಕ್ಟ್ ಆಗಿದ್ದು, ಗೇಮ್ ಚಟಕ್ಕೆ ಬಿದ್ದು ಪದೇ ಪದೇ ಹಣ ಕೇಳುತ್ತಿದ್ದ. ವಾರದ ಹಿಂದೆ ಹಣ ಕೊಡುವಂತೆ ಮಾವನ ಮೇಲೆ ಹಲ್ಲೆ ಕೂಡ ಮಾಡಿದ್ದ. ಇದರಿಂದ ಬೇಸತ್ತ ನಾಗಪ್ರಸಾದ್, ಬಾಲಕನ ಕತ್ತು ಸೀಳಿ ಕೊಂದಿದ್ದ. ಅಷ್ಟೇ ಅಲ್ಲದೇ ತಾನೂ ಸಹ ಕೆರೆಗೆ ಹಾರಿ ಸಾಯಲು ಮುಂದಾಗಿದ್ದ ಘಟನೆ ಆಗಸ್ಟ್ ೮ರಂದು ವರದಿಯಾಗಿತ್ತು.


ಘಟನೆಯ ಬಳಿಕ ಹಣದ ಕೊರತೆಯಿಂದ ಮೆಜೆಸ್ಟಿಕ್‌ನಲ್ಲಿ ಮೂರು ದಿನ ಕಾಲ ತಂಗಿದ್ದ ನಾಗಪ್ರಸಾದ್, ನಂತರ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದ. ಪೊಲೀಸರು ಆತನ ಮೇಲೆ ಎಫ್‌ಐಆರ್ ದಾಖಲಿಸಿ ಜೈಲಿನಲ್ಲಿಟ್ಟಿದ್ದರು. ಬಳಿಕ ಆತನ ತಂಗಿ ಶಿಲ್ಪಾ ಜಾಮೀನು ಮೂಲಕ ಅಣ್ಣನನ್ನು ಜೈಲಿನಿಂದ ಹೊರ ತಂದಿದ್ದಳು.
ಅದರ ನಂತರ ಕುಟುಂಬ ಸಮೇತವಾಗಿ ಬಿಹಾರದ ಪ್ರವಾಸ ಕೈಗೊಂಡ ನಾಲ್ವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.ಮೃತರಿಗೆ ಸೇರಿದ ಮೊಬೈಲ್ ಪೋನ್‌ಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಹಲವು ದಾಖಲೆಗಳು,
೧,೧೮ ಲಕ್ಷ ಹಣ ಹಾಗೂ ದೊಡ್ಡ ಪ್ರಮಾಣದ ನಿದ್ರೆ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.


ರಾಜಗೀರ್ ಬೌದ್ಧ ಮತ್ತು ಜೈನರಿಗೆ ಅತ್ಯಂತ ಪವಿತ್ರವೆನಿಸಿದ ಯಾತ್ರಾ ಸ್ಥಳ. ಈ ನಾಲ್ವರೂ ನೇಪಾಳಕ್ಕೆ ಪ್ರವಾಸ ಹೋಗಿ ಜ.೩೦ರಂದು ರಾಜಗೀರ್‌ಗೆ ಬಂದು ಕೊಠಡಿ ಬುಕ್ ಮಾಡಿದ್ದರು. ಮುಂದೆ ನಾಲಂದಾದ ಪಾವಾಪುರಿಗೆ ಹೋಗಲು ಯೋಜಿಸಿದ್ದರು. ಶುಕ್ರವಾರ ಬೆಳಿಗ್ಗೆ ೯:೪೦ರ ಸುಮಾರಿಗೆ ಕೊಠಡಿಯಿಂದ ಕೊಳೆತ ವಾಸನೆ ಬಂದ ಹಿನ್ನೆಲೆ ಧರ್ಮಶಾಲೆಯ ಮ್ಯಾನೇಜರ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ನಾಲ್ಕೂ ಮಂದಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಮೂರು ದಿನಗಳಿಂದ ಕೊಠಡಿಯ ಬಾಗಿಲನ್ನೇ ತೆರೆದಿರಲಿಲ್ಲ ಎನ್ನಲಾಗಿದೆ. ಮೃತರಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ತುಮಕೂರು ಮೂಲದವರು ಎಂದು ತಿಳಿದುಬಂದಿದೆ.


ಪೊಲೀಸರ ಸಂಪರ್ಕ:


ಕರ್ನಾಟಕ ಪೊಲೀಸರನ್ನು ಸಂಪರ್ಕಿಸಿದ್ದೇವೆ. ಗುಬ್ಬಿ ಪೊಲೀಸರ ನೆರವಿನೊಂದಿಗೆ ಮೃತರ ಕುಟುಂಬಕ್ಕೆ ಮಾಹಿತಿ ತಲುಪಿಸಿದ್ದೇವೆ. ಎಲ್ಲಾ ಶವಗಳನ್ನು ನಾಲಂದಾ ಜಿಲ್ಲೆಯ ಬಿಹಾರ್ ಶರೀಫ್‌ನಲ್ಲಿರುವ ಸದರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವೀಡಿಯೊಗ್ರಫಿಯೊಂದಿಗೆ ವೈದ್ಯಕೀಯ ಮಂಡಳಿಯು ಶವಪರೀಕ್ಷೆ ನಡೆಸಲಿದೆ’ ಎಂದು ರಾಜಗೀರ್ ಪೊಲೀಸರು ತಿಳಿಸಿದ್ದಾರೆ.


ಎಲ್ಲ ದಿಕ್ಕುಗಳಿಂದಲೂ ಪ್ರಕರಣದ ತನಿಖೆ ನಡೆಸಲು ನಾಲಂದಾ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಈ ಸಂಬಂಧ ಇಬ್ಬರು ಸದಸ್ಯರ ತಂಡವನ್ನು ಕರ್ನಾಟಕದ ಗುಬ್ಬಿಗೆ ಕಳುಹಿಸಲಾಗಿದೆ.