
ಡಿಕೆಶಿ ತಿರುಗೇಟು
ಬೆಂಗಳೂರು, ಜ.೮- ಸಚಿವಾಗಿ ನನಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗಿಂತ ಹೆಚ್ಚಿನ ಅನುಭವ ಇದೆ. ಯಾರ ಜತೆ ಸಭೆ ನಡೆಸಬೇಕು, ಎಲ್ಲವೂ ನನಗೆ ಗೊತ್ತಿದೆ. ಕುಮಾರಸ್ವಾಮಿ ಅವರಿಂದ ನಾನು ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಜೆಡಿಎಸ್ ಮುಖಂಡರಾದ ಗೋವಿಂದರಾಜು ಹಾಗೂ ಅವರ ಪತ್ನಿ ಮಾಜಿ ಪಾಲಿಕೆ ಸದಸ್ಯೆ ಗೌರಮ್ಮ ಅವರ ಪಕ್ಷ ಸೇರ್ಪಡೆ ಸಂದರ್ಭದಲ್ಲಿ, ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಕ್ಕೆ ಟೀಕಿಸಿರುವ ಕುಮಾರಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರಿಗಿಂತ ಹೆಚ್ಚು ಕಾಲ ಸಚಿವನಾಗಿ ನಾನು ಕೆಲಸ ಮಾಡಿದ್ದೇನೆ. ಯಾರ ಜತೆ ಸಭೆ ಮಾಡಬೇಕು, ಯಾರನ್ನು ಸಭೆಗೆ ಕರೆಯಬೇಕು ಎಲ್ಲವೂ ಗೊತ್ತಿದೆ. ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದರು.
ಜೆಡಿಎಸ್‌ಗೆ ಒಂದು ಸಿದ್ಧಾಂತ, ಒಂದು ತತ್ವ ಯಾವುದೂ ಇಲ್ಲ. ಅದು ಒಂದು ರೀತಿ ವೈಯುಕ್ತಿಕ ಆಸ್ತಿ ತರ ಆಗಿದೆ. ಸದ್ಯದಲ್ಲೇ ಬಿಜೆಪಿ ಜತೆ ಜೆಡಿಎಸ್ ವಿಲೀನವಾಗುವ ಸಾಧ್ಯತೆಯೂ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಲೆಕ್ಕಕ್ಕೆ ಮೂರು ಪಕ್ಷ, ಆಟಕ್ಕೆ ಎರಡು ಪಕ್ಷ ಎನ್ನುವ ಹಾಗೆ ಆಗಿದೆ. ಆದಷ್ಟು ಬೇಗ ಜೆಡಿಎಸ್‌ನವರು ಬಿಜೆಪಿಯಲ್ಲಿ ವಿಲೀನವಾಗಲಿ. ಆಗ ರಾಜ್ಯದಲ್ಲಿ ಎರಡೇ ಪಕ್ಷ ಪ್ರಬಲವಾಗಿರುತ್ತವೆ. ರಾಜಕಾರಣ ಮಾಡಕ್ಕೂ, ಹೋರಾಟ ಮಾಡಕ್ಕೂ ಒಳ್ಳೆಯದಾಗುತ್ತದೆ. ಎರಡು ಪಕ್ಷ ಇದ್ದರೆ ರಾಜ್ಯಕ್ಕೂ ಒಳ್ಳೆಯದು ಎಂದರು.
ಈ ವರ್ಷ ಚುನಾವಣಾ ವರ್ಷ ಎಂದು ಎಲ್ಲರೂ ಭಾವಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ನಾವು ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರು ಪಾಲಿಕೆ ಚುನಾವಣೆಯೂ ಬರುತ್ತಿದೆ. ಎಲ್ಲರಿಗೂ ಅರ್ಜಿ ಹಾಕಲು ಅವಕಾಶ ನೀಡಿ ದಿನಾಂಕವನ್ನೂ ನಿಗದಿ ಮಾಡಿದ್ದೇವೆ. ೭೭೯ ಜನ ಅರ್ಜಿ ಹಾಕಿದ್ದಾರೆ. ತಾವು ಎಲ್ಲವನ್ನೂ ಪರಾಮರ್ಶೆ ಮಾಡಿ ಸರಿಯಾದ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.




























