
ಬೆಂಗಳೂರು, ಜ. ೧೦- ಮನರೇಗಾ ಯೋಜನೆಯ ಸ್ವರೂಪವನ್ನು ಬದಲಿಸಿ ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ವಿಬಿಜಿ ರಾಮ್‌ಜಿ ಕಾಯ್ದೆಯನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬಲವಾಗಿ ಸಮರ್ಥಿಸಿಕೊಂಡು ಹೊಸ ಕಾಯ್ದೆಯಿಂದ ನರೇಗಾ ಯೋಜನೆಯ ಅವ್ಯವಹಾರ, ದುರುಪಯೋಗಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟಲ್‌ನಲ್ಲಿಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಛಲವಾದಿ ನಾರಾಯಣಸ್ವಾಮಿ ಇವರುಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮನರೇಗಾ ಯೋಜನೆಯ ಲೋಪದೋಷಗಳನ್ನು ಸರಿಪಡಿಸಿ ಹೊಸದಾಗಿ ವಿಬಿಜಿ ರಾಮಜಿ ಕಾಯ್ದೆ ಜಾರಿಗೆ ತರಲಾಗಿದೆ. ಇದು ಸದುದ್ಧೇಶದ ಕಾಯ್ದೆಯಾಗಿದೆ ಎಂದರು.
ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಮನರೇಗಾ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಆ ಕಾಯ್ದೆಯನ್ನು ಎಷ್ಟು ಜನ ಎಷ್ಟರ ಮಟ್ಟಿಗೆ ದುರುಪಯೋಗಪಡಿಸಿಕೊಂಡಿದ್ದಾರೆ, ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ನಡೆಸಲಾಗಿದೆ ಎಂದು ತನಿಖೆಯಿಂದ ಬಹಿರಂಗಗೊಂಡಿದೆ. ಹಾಗಾಗಿಯೆ ಭ್ರಷ್ಟಾಚಾರವನ್ನು ತಡೆಗಟ್ಟಲು ಪಾರದರ್ಶಕತೆ ಕಾಯ್ದುಕೊಳ್ಳಲು ಕೇಂದ್ರ ಸರ್ಕಾದ ಪ್ರಧಾನಿ ಮೋದಿ ಸರ್ಕಾರ ಮನರೇಗಾ ಕಾಯ್ದೆಯ ಸ್ವರೂಪ ಬದಲಿಗೆ ಹೊಸದಾಗಿ ವಿಬಿಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದರು.
ಈ ಹಿಂದೆ ಮನರೇಗಾ ಕಾಯ್ದೆ ಜಾರಿ ಇದ್ದಾಗ ಸುಳ್ಳು ಬಿಲ್‌ಗಳನ್ನು ಸೃಷ್ಟಿಸಿ ನಿರುದ್ಯೋಗಿಗಗಳನ್ನು ವಂಚಿಸಿ ಉಳ್ಳವರು ಹಣ ಮಾಡಿದರು. ಲಕ್ಷಾಂತರ ರೂ. ಭ್ರಷ್ಟಾಚಾರ ನಡೆದಿದ್ದು, ತನಿಖೆಯಿಂದ ಗೊತ್ತಾಗಿದೆ. ಇದೆಲ್ಲವನ್ನು ಮನಗಂಡು ಭ್ರಷ್ಟಾಚಾರಕ್ಕೆ ತಡೆ ಹಾಕಲು ಹೊಸ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಎಂದರು.
ಬಹಿರಂಗ ಚರ್ಚೆಗೆ ಸಿದ್ಧ
ಮನರೇಗಾ ಮತ್ತು ವಿಬಿಜಿ ರಾಮ್‌ಜಿ ಕಾಯ್ದೆಯ ಬಹಿರಂಗ ಚರ್ಚೆಗೆ ಬರಲಿ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸವಾಲಿಗೆ ನಾವು ಸಿದ್ಧ. ಈ ಯೋಜನೆಯ ಬಹಿರಂಗ ಚರ್ಚೆ ನಡೆಯಲಿ. ನಾವು ಈ ಯೋಜನೆಯ ಉದ್ದೇಶ, ಎಲ್ಲವನ್ನೂ ಹೇಳುತ್ತೇವೆ ಎಂದರು.
ಮನರೇಗಾ ಯೋಜನೆಯ ಲೋಪದೋಷಗಳು ನ್ಯೂನ್ಯತೆಗಳನ್ನು ಸರಿಪಡಿಲು ವಿಬಿಜಿ ರಾಮ್‌ಜಿ ಕಾಯ್ದೆಯಿಂದ ಯಾವ ರೀತಿ ಸಾಧ್ಯ ಎಂಬುದನ್ನು ಬಹಿರಂಗವಾಗಿ ಚರ್ಚಿಸಲು ನಾವು ತಯಾರು. ಈ ಯೋಜನೆ ಸದುದ್ಧೇಶದಿಂದ ಕೂಡಿದೆ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು. ಸುಮ್ಮನೆ ಟೀಕೆ ಟಿಪ್ಪಣಿ ಬೇಡ ಎಂದು ಕುಮಾರಸ್ವಾಮಿ ಹೇಳಿದರು.
ಹೊಸ ಯೋಜನೆಯಡಿ ಕೂಲಿ ದಿನಗಳ ಸಂಖ್ಯೆಯನ್ನು ೧೦೦ ರಿಂದ ೧೨೫ ಕ್ಕೆ ಹೆಚ್ಚಿಸಲಾಗಿದೆ ಎಂದರು.
ಹೊಸ ಯೋಜನೆಯಡಿ ರಾಜ್ಯ ಸರ್ಕಾರ ಶೇ. ೪೦ ರಷ್ಟು ಹಣ ಭರಿಸಬೇಕು ಎಂಬ ಆಕ್ಷೇಪ ತೆಗೆದಿದೆ. ಆದರೆ ಹೊಸ ಯೋಜನೆಯಡಿ ೧೭ ಸಾವಿರ ಕೋಟಿ ರೂ. ರಾಜ್ಯಗಳಿಗೆ ಕೇಂದ್ರದಿಂದ ಹೆಚ್ಚುವರಿ ಹಣ ಸಿಗುತ್ತದೆ. ಹಾಗಾಗಿ ಹಣ ಕಡಿತ ಆಗಲ್ಲ ಎಂದರು.



























