
ಪ್ರಮಾಣ ವಚನಕ್ಕೆ ಸಿದ್ಧತೆ
ಕೋಲ್ಕತ್ತಾ,ಮೇ.೮- ಪಶ್ಚಿಮ ಬಂಗಾಳದಲ್ಲಿ ಮೊದಲ ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬರಲಿದ್ದು, ನಾಳೆ ಬೆಳಗ್ಗೆ ನೂತನ ಮುಖ್ಯಮಂತ್ರಿ ಮತ್ತು ಸರ್ಕಾರದ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು ಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ.
ಬಿಜೆಪಿ ಸರ್ಕಾರದ ರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ನಿತಿನ್ ನಬೀನ್,ಕೇಂದ್ರ ವೀಕ್ಷಕ ಅಮಿತ್ ಶಾ,ಸೇರಿದಂತೆ ಕೇಂದ್ರದ ಹಲವು ಸಚಿವರು, ಬಿಜೆಪಿ ಆಡಳಿತದ ಮುಖ್ಯಮಂತ್ರಿಗಳು,ಮ ಎನ್ ಡಿಎ ಆಡಳಿತದ ಮುಖ್ಯಮಂತ್ರಿಗಳು , ಉಪ ಮುಖ್ಯಮಂತ್ರಿಗಳು ಸೇರಿದಂತೆ ಹಲವು ನಾಯಕರು ಸಾಕ್ಷಿಯಾಗಲಿದ್ದಾರೆ.
ನಾಳೆ ಪಶ್ವಿಮ ಬಂಗಾಳದಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ ನೂತನ ಶಾಸಕಾಂಗ ಪಕ್ಷದ ಸಭೆ ಕೇಂದ್ರ ಸಚಿವ ಹಾಗೂ ವೀಕ್ಷಕ ಅಮಿತ್ ಶಾ ನೇತೃತ್ವದಲ್ಲಿ ಇಂದು ಸಂಜೆ ನಡೆಯಲಿದ್ದು ನೂತನ ಶಾಸಕಾಂಗ ಪಕ್ಷದ ನಾಯಕ ಆಯ್ಕೆ ನಡೆಯಲಿದೆ
ಮುಖ್ಯಮಂತ್ರಿ ಆಗುವ ರೇಸ್‌ನಲ್ಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮುಂಚೂಣಿಯಲ್ಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ಕೇಂದ್ರ ಸಚಿವ ಸುಕಾಂತ ಮಜುಂದಾರ್ ಮತ್ತು ಮಾಜಿ ರಾಜ್ಯಸಭಾ ಸಂಸದ ಸ್ವಪನ್ ದಾಸ್‌ಗುಪ್ತ, ಪಕ್ಷದ ನಾಯಕಿ ರೂಪಾ ಗಂಗೂಲಿ ಸೇರಿದಂತೆ ಇತರ ಹೆಸರು ಕೇಳಿ ಬಂದಿದೆ, ಆದರಲ್ಲಿ ಯಾರಿಗೆ ಮುಖ್ಯಮಂತ್ರಿ ಹುದ್ದೆ ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ.
ರಾಜ್ಯದಲ್ಲಿ ಸರ್ಕಾರ ರಚನೆಗೆ ಮುನ್ನ ಪ್ರಮುಖ ಹೆಜ್ಜೆಯಾಗಿ, ಪಶ್ಚಿಮ ಬಂಗಾಳಕ್ಕೆ ಪಕ್ಷದ ಮುಖ್ಯಮಂತ್ರಿಯನ್ನು ನಿರ್ಧರಿಸಲು ಬಿಜೆಪಿಯ ಹೊಸದಾಗಿ ಆಯ್ಕೆಯಾದ ಶಾಸಕರ ನಿರ್ಣಾಯಕ ಸಭೆ ನಡೆಯಲಿದ್ದು ಶಾಸಕರ ಅಭಿಪ್ರಾಯ ಆಲಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.
ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಔಪಚಾರಿಕ ಅವಧಿ ಕೊನೆಗೊಂಡ ನಂತರ ರಾಜಕೀಯವಾಗಿ ಮಹತ್ವದ ಕ್ಷಣದಲ್ಲಿ ಈ ಬೆಳವಣಿಗೆ ಸಂಭವಿಸಿದೆ. ೧೭ ನೇ ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸುವ ಅಧಿಸೂಚನೆಯನ್ನು ರಾಜ್ಯಪಾಲರು ಹೊರಡಿಸಿದ್ದು, ಮೇ ೭ ರಂದು ವಿಧಾನಸಭೆಯ ಅಸ್ತಿತ್ವವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಲಾಗಿದೆ.

























