
ಡಿಕೆಶಿ ಸವಾಲು
ಬೆಂಗಳೂರು, ಜ. ೯- ಮನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದರೆ ಆ ಬಗ್ಗೆ ಸಿಬಿಐ ತನಿಖೆ ನಡೆಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಮನರೇಗಾ ಯೋಜನೆಯಲ್ಲಿ ಈ ಹಿಂದೆ ೧೧ ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೇಳಿಕೆಗೆ ಬೆಂಗಳೂರಿನಲ್ಲಿಂದು ಪ್ರತಿಕ್ರಿಯಿಸಿದ ಅವರು, ಸಿಬಿಐ ತನಿಖೆ ಮಾಡಲಿ ಸತ್ಯ ಗೊತ್ತಾಗುತ್ತದೆ ಎಂದರು.
ಕೇಂದ್ರ ಸರ್ಕಾರ ಮನರೇಗಾ ಯೋಜನೆಯ ಸ್ವರೂಪ ಬದಲಿಸಿದರ ವಿರುದ್ಧ ನಾವು ಹೋರಾಟ ನಡೆಸುತ್ತೇವೆ. ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಚರ್ಚಿಸುತ್ತೇವೆ ಎಂದು ಹೇಳಿದರು.
ಈ ಹಿಂದಿನ ಯುಪಿಎ ಸರ್ಕಾರದ ಮನರೇಗಾ ಯೋಜನೆಯ ಸ್ವರೂಪ ಬದಲಿಸಿರುವ ಬಿಜೆಪಿಯವರು ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ. ಮನರೇಗಾ ಯೋಜನೆಯ ಈಗಿನ ವಿಬಿಜಿ ರಾಮ್‌ಜಿ ಕಾಯ್ದೆಗೂ ಏನು ವ್ಯತ್ಯಾಸ ಎಂಬುದನ್ನು ಚರ್ಚೆ ಮಾಡೋಣ ಎಂದರು.
ಮನರೇಗಾ ಮರು ಸ್ಥಾಪಿಸುವಂತೆ ಆಗ್ರಹಿಸಿ ನಾವು ಹೋರಾಟ ನಡೆಸುತ್ತೇವೆ. ಜನರಿಗೆ ಎಲ್ಲವನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ ಎಂದು ಅವರು ಹೇಳಿದರು.
ಕೇರಳದ ಕಾಸರಗೋಡಿನ ಶಾಲೆಯಲ್ಲಿ ಮಲೆಯಾಳಂ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಅ ಧ್ಯಯನ ಕಡ್ಡಾಯಗೊಳಿಸುವ ಕಾಯ್ದೆಯನ್ನು ಜಾರಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ನಾನು ಉತ್ತರ ಹೇಳುತ್ತೇನೆ ಎಂದರು.
ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯನ್ನು ನಡೆಸಿದ್ದರ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಸಚಿವರ ಖಾತೆ ಒತ್ತುವರಿ ಮಾಡುತ್ತಿದ್ದಾರೆ ಅವರಿಗೆ ಎರಡು ಕೊಂಬು ಇದೀಯಾ ಎಂದು ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಆಯ್ತಪ್ಪಾ ಅವರಿಗೆ ಒಳ್ಳೆಯದಲ್ಲಾಗಲಿ ಅವರ ಶಾಸಕರಿದ್ದಾರೆ. ವಿಧಾನಸಭೆಗೆ ಕರೆಯುತ್ತೇವೆ ಅಲ್ಲಿ ಚರ್ಚೆ ಮಾಡಲಿಕ್ಕೆ ಹೇಳಿ ಎಂದರು.




























