
ಔರಾದ್ :ಮಾ.17: ತಾಲ್ಲೂಕಿನ ಎಲ್ಲ ಗ್ರಾಮ ಮತ್ತು ತಾಂಡಾಗಳಿಗೆ ಸ್ಮಶಾನ ಭೂಮಿಯನ್ನು ಕಲ್ಪಿಸಬೇಕೆಂದು ಶಾಸಕ ಪ್ರಭು.ಬಿ ಚವ್ಹಾಣ ಅವರು ಸರ್ಕಾರವನ್ನು ಆಗ್ರಹಿಸಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶಾಸಕರು ಚುಕ್ಕೆಗುರುತಿನ ಪ್ರಶ್ನೆ ಕೇಳಿದರು. ಔರಾದ(ಬಿ) ಕ್ಷೇತ್ರದಲ್ಲಿ 154 ಗ್ರಾಮಗಳು 157 ತಾಂಡಾಗಳಿವೆ. ಕೆಲವು ಗ್ರಾಮ ಮತ್ತು ತಾಂಡಾಗಳಿಗೆ ಇಂದಿಗೂ ಸ್ಮಶಾನಭೂಮಿಯಿಲ್ಲ. ನಾನು ಪ್ರತಿ ವರ್ಷ ಗ್ರಾಮ ಸಂಚಾರ ಮಾಡುವ ವೇಳೆ ಬಹಳಷ್ಟು ಊರುಗಳಲ್ಲಿ ಸ್ಮಶಾನಭೂಮಿ ಬಗ್ಗೆ ಮನವಿಗಳು ಬರುತ್ತವೆ. ಹಿಂದೆ ಗಣೇಶಪೂರ(ಯು) ಮತ್ತು ಲಿಂಗಿ ಗ್ರಾಮಗಳಲ್ಲಿ ರಸ್ತೆಯ ಮೇಲೆಯೇ ಅಂತಿಮ ಸಂಸ್ಕಾರ ನಡೆಸಲಾಗಿದೆ. ಸಾಕಷ್ಟು ಗಲಾಟೆಗಳು, ಪ್ರಕರಣಗಳು ದಾಖಲಾಗಿವೆ ಎಂದು ಸದನಕ್ಕೆ ವಿಷಯದ ಗಂಭೀರತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಸರ್ಕಾರಿ ಜಮೀನು ಲಭ್ಯವಿರುವ ಕಡೆ ಕೂಡಲೇ ಸ್ಮಶಾನಕ್ಕಾಗಿ ಭೂಮಿ ಕಾಯ್ದಿರಿಸುವ ಕೆಲಸವಾಗಬೇಕು. ಜಮೀನಿಲ್ಲದ ಕಡೆ ಖಾಸಗಿಯವರಿಂದ ಖರೀದಿಸಲು ವ್ಯವಸ್ಥೆ ಮಾಡಬೇಕು. ಎಲ್ಲ ಗ್ರಾಮ ಮತ್ತು ತಾಂಡಾಗಳಿಗೆ ಸ್ಮಶಾನಭೂಮಿ ಕಲ್ಪಿಸುವ ಜೊತೆಗೆ ಅವುಗಳಿಗೆ ರಸ್ತೆ, ಚಿತಾಗಾರ, ಕಾಂಪೌಂಡ್, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು, ಗ್ರಾಮ , ತಾಂಡಾ ಸೇರಿದಂತೆ ಎಲ್ಲ ವಸತಿ ಪ್ರದೇಶಗಳಿಗೆ ಅವಶ್ಯಕ ಸ್ಮಶಾನಭೂಮಿ ಮಾಡಬೇಕೆಂದು ಕಳೆದ 10 ವರ್ಷಗಳಿಂದ ಎಲ್ಲ ಸರ್ಕಾರಗಳಿಂದ ಪ್ರಯತ್ನಗಳು ನಡೆದಿವೆ. ಹೈಕೋರ್ಟ್ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಆದರೂ ಕೆಲವು ಗ್ರಾಮಗಳಿಗೆ ಇಂದಿಗೂ ಸ್ಮಶಾನಭೂಮಿ ಕೊಡಲು ಸಾಧ್ಯವಾಗದೇ ಇರುವುದು ಬೇಸರದ ಸಂಗತಿ ಎಂದರು.
ಲಭ್ಯವಿರುವ ಸರ್ಕಾರಿ ಜಮೀನನ್ನು ರೈತರು ಹಾಗೂ ಅನ್ಯ ವಿಷಯಗಳಿಗೆ ಕೊಡುವ ಕಾರಣ ಸ್ಮಶಾನಭೂಮಿಗೆ ಜಮೀನು ಇಲ್ಲದಂತಾಗಿದೆ. ಸ್ಮಶಾನಭೂಮಿಯಿಲ್ಲದ ಗ್ರಾಮಗಳಲ್ಲಿ ಖಾಸಗಿಯವರಿಂದ ಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಹಣ ನೀಡಿ ಖಾಸಗಿ ಜಮೀನು ಖರೀದಿಸಲಾಗುತ್ತದೆ. ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಸ್ಮಶಾನಭೂಮಿಗಳ ಖರೀದಿಗೆ 58 ಕೋಟಿ ಖರ್ಚು ಮಾಡಲಾಗಿದೆ ಎಂದರು.
ಔರಾದ(ಬಿ) ಕ್ಷೇತ್ರದಲ್ಲಿ 154 ವಸತಿ ಪ್ರದೇಶಗಳ ಪೈಕಿ 9 ಪ್ರದೇಶಗಳಲ್ಲಿ ಸ್ಮಶಾನಭೂಮಿ ಇಲ್ಲವೆಂದು ಮಾಹಿತಿ ಬಂದಿದೆ. ಈ ಪೈಕಿ ಎರಡು ಗ್ರಾಮಗಳಲ್ಲಿ ಸರ್ಕಾರಿ ಜಮೀನಿದ್ದು, ವಾರದೊಳಗಾಗಿ ಸ್ಮಶಾನಕ್ಕೆ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ. ಉಳಿದೆಡೆ ಪಕ್ಕದ ಊರುಗಳಲ್ಲಿ ಜಮೀನು ಕಾಯ್ದಿರಿಸಲು 15 ದಿನಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲ ಗ್ರಾಮಗಳಿಗೆ ಕನಿಷ್ಠ ಸ್ಮಶಾನಭೂಮಿ ಸೌಲಭ್ಯ ಇರಬೇಕು ಎಂಬ ಉದ್ದೇಶ ಹೊಂದಿದ್ದು, ಒಂದು ವೇಳೆ ಇದಕ್ಕೆ ಒಪ್ಪದೇ ಇದ್ದಲ್ಲಿ ಸ್ಥಳೀಯವಾಗಿ ಖಾಸಗಿಯವರು ಮಾರಾಟಕ್ಕೆ ಸಿದ್ದರಿದಲ್ಲಿ ಅಂತಹ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗುತ್ತದೆ ಎಂದರು. ಇದಲ್ಲದೇ ಸಾರ್ವಜನಿಕ ಸ್ಮಶಾನಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಗ್ರಾಮ ಪಂಚಾಯಿತಿಯ ಮೂಲಕ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದರು.
ಸ್ಮಶಾನಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಸವಿಸ್ತಾರ ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ ಅವರು ಮಾತನಾಡಿ, ರಾಜ್ಯದಲ್ಲಿ ಸ್ಮಶಾನಭೂಮಿಗೆ 58 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಎಲ್ಲ ತಾಲ್ಲೂಕುಗಳಿಗೆ ಇದು ಸಾಲುವುದಿಲ್ಲ. ಅನ್ಯ ವಿಷಯಗಳಿಗೆ ಸರ್ಕಾರಿ ಜಮೀನು ಕೊಡುವುದರಿಂದ ಸ್ಮಶಾನಕ್ಕೆ ಜಾಗ ಇಲ್ಲದಂತಾಗಿದೆ. ಶಾಲೆ, ಅಂಗನವಾಡಿ ಮತ್ತು ಸ್ಮಶಾನಭೂಮಿಗಳಿಗೆ ಮೊದಲು ಆದ್ಯತೆ ನೀಡಿ ನಂತರ ಅನ್ಯ ಕಾರ್ಯಕ್ಕೆ ಮಂಜೂರು ಮಾಡುವಂತೆ ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಎಲ್ಲ ತಾಂಡಾಗಳು ಕಂದಾಯ ಗ್ರಾಮಗಳಾಗಲಿ
ಬೀದರ ಜಿಲ್ಲೆಯಲ್ಲಿ ಹೆಚ್ಚು ತಾಂಡಾಗಳಿದ್ದು, ಔರಾದ ಕ್ಷೇತ್ರದಲ್ಲಿ 157 ತಾಂಡಾಗಳಿವೆ. ಈ ಪೈಕಿ 30 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ಉಳಿದೆಲ್ಲ ತಾಂಡಾಗಳನ್ನು ಮಾನದಂಡಗಳ ಅನ್ವಯ ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು ಮತ್ತು ಹಾಗೆಯೇ ಗೋಮಾಳ ಸೇರಿದಂತೆ ಸರ್ಕಾರದ ಜಮೀನುಗಳ ಅತಿಕ್ರಮಣವನ್ನು ನಿಯಂತ್ರಿಸಬೇಕು ಎಂದು ಶಾಸಕರಾದ ಪ್ರಭು ಚವ್ಹಾಣ ಅವರು ಆಗ್ರಹಿಸಿದರು. ತಾಂಡಾಗಳ ಪಟ್ಟಿ ಒದಗಿಸಿದಲ್ಲಿ ಅಗತ್ಯ ಕ್ರಮ ವಹಿಸಲಾಗುವುದೆಂದು ಸಚಿವರು ತಿಳಿಸಿದರು.

























