
ನವದೆಹಲಿ,ಮಾ.೧೯: ದೇಶದಲ್ಲಿ ಎಲ್‌ಪಿಜಿ ಅನಿಲ ಸರಬರಾಜಿನ ಮೇಲಿನ ಒತ್ತಡ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಚಿಂತಾಜನಕವಾಗಿದ್ದರೂ ಡಿಸ್ಟ್ರಿಬ್ಯೂಟರ್‌ಗಳ ಮಟ್ಟದಲ್ಲಿ ತೊಂದರೆ ಆಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪಶ್ಚಿಮ ಏಷ್ಯಾದಿಂದ ಆಗುತ್ತಿರುವ ಆಮದು ವ್ಯತ್ಯಯಗಳ ಹಿನ್ನೆಲೆ ದೇಶದ ಒಟ್ಟು ಅಗತ್ಯದ ಸುಮಾರು ೬೦% ಪೂರೈಕೆಗೆ ಪರಿಣಾಮ ಬಿದ್ದಿದೆ.
ಕೇಂದ್ರವು ಗೃಹ ಬಳಕೆದಾರರಿಗೆ ಪ್ರಾಥಮ್ಯ ನೀಡುತ್ತಿದ್ದು, ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ನಿಯಂತ್ರಿತವಾಗಿ ಹೆಚ್ಚಿಸಲಾಗುತ್ತಿದೆ. ಪೈಪ್ ಮೂಲಕ ನೈಸರ್ಗಿಕ ಅನಿಲ ಜಾಲವನ್ನು ವೇಗವಾಗಿ ಜಾರಿಗೊಳಿಸುವ ರಾಜ್ಯಗಳಿಗೆ ೧೦% ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ನೀಡುವ ಪ್ರಸ್ತಾವನೆ ಮಾಡಲಾಗಿದೆ.
ಕಾಳಬಜಾರ್ ವಿರುದ್ಧ ಕಠಿಣ ಕ್ರಮ
ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು, ಎಲ್‌ಪಿಜಿ ಸಂಗ್ರಹಣೆ ಮತ್ತು ಕಾಳಬಜಾರ್ ತಡೆಗಟ್ಟಲು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ದೇಶದ ೩೧ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ೨೫ ಪ್ರದೇಶಗಳಲ್ಲಿ ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ.ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (ಅಉಆ) ಜಾಲ ಇರುವ ಪ್ರದೇಶಗಳಲ್ಲಿ ಎಲ್‌ಪಿಜಿ ಬಳಕೆದಾರರು ಪಿಎನ್‌ಜಿ ಕಡೆಗೆ ತಿರುಗಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ರಾಜ್ಯಗಳು ಅನುಮತಿ ಪ್ರಕ್ರಿಯೆ ಸರಳೀಕರಣ ಮತ್ತು ಶುಲ್ಕ ಕಡಿತದ ಮೂಲಕ ನೈಸರ್ಗಿಕ ಅನಿಲ ಬಳಕೆಯನ್ನು ಉತ್ತೇಜಿಸಬೇಕು ಎಂದು ಸೂಚಿಸಲಾಗಿದೆ.
ಆನ್‌ಲೈನ್ ಬುಕ್ಕಿಂಗ್ ಪ್ರಮಾಣವು ೯೪%ಕ್ಕೆ ಏರಿಕೆಯಾಗಿದೆ. ಬುಧವಾರ ಮಾತ್ರ ೫೭ ಲಕ್ಷಕ್ಕಿಂತ ಹೆಚ್ಚು ರಿಫಿಲ್ ಬೇಡಿಕೆ ದಾಖಲಾಗಿದೆ. ಕಳೆದ ಎರಡು ವಾರಗಳಲ್ಲಿ ಸುಮಾರು ೧.೨೫ ಲಕ್ಷ ಹೊಸ ಗೃಹ, ವಾಣಿಜ್ಯ ಹಾಗೂ ಕೈಗಾರಿಕಾ ಸಂಪರ್ಕಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ರಾಜ್ಯಗಳ ಮನವಿ
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರು ನಗರದಲ್ಲಿ ವಾಣಿಜ್ಯ ಎಲ್‌ಪಿಜಿ ಮತ್ತು ಆಟೋ ಎಲ್‌ಪಿಜಿ ಕೊರತೆ ಉಂಟಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.ಉತ್ತರ ಪ್ರದೇಶದ ಮೀರುಟ್ ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಎಲ್‌ಪಿಜಿ ಸಿಲಿಂಡರ್ ಲಭ್ಯವಿಲ್ಲದ ಕಾರಣ, ಅಡುಗೆಗಾರರು ತಾತ್ಕಾಲಿಕ ಮಣ್ಣಿನ ಚುಲ್ಲಿಯಲ್ಲಿ ಆಹಾರ ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಅಧಿಕಾರಿಗಳ ನಡುವೆ ಪರಸ್ಪರ ವಿರೋಧಿ ಹೇಳಿಕೆಗಳು ಕೇಳಿಬಂದಿವೆ.
ತಜ್ಞರ ಪ್ರಕಾರ, ಎಲ್‌ಪಿಜಿ ಸರಬರಾಜು ಸದ್ಯಕ್ಕೆ ಸ್ಥಿರವಾಗಿದ್ದರೂ, ಪರಿಸ್ಥಿತಿ ಏಪ್ರಿಲ್ ನಂತರವೂ ಮುಂದುವರಿದರೆ ನೈಸರ್ಗಿಕ ಅನಿಲ ಲಭ್ಯತೆ ಮತ್ತು ಬೆಲೆ ಹೆಚ್ಚಳ ಪ್ರಮುಖ ಸಮಸ್ಯೆಯಾಗಬಹುದು.ಎಲ್‌ಪಿಜಿ ಸರಬರಾಜಿನ ಮೇಲಿನ ಒತ್ತಡ ಇನ್ನೂ ಮುಂದುವರಿದಿದ್ದು, ಕೇಂದ್ರ-ರಾಜ್ಯಗಳ ಸಮನ್ವಯ ಮತ್ತು ಪರ್ಯಾಯ ಅನಿಲ ವ್ಯವಸ್ಥೆಗಳ ಜಾರಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

























