
ತುಮಕೂರು, ಜ. ೯- ಶಬರಿಮಲೈ ಅಯ್ಯಪ್ಪಸ್ವಾಮಿಯ ದರ್ಶನ ಮುಗಿಸಿಕೊಂಡು ಊರಿಗೆ ತೆರಳುತ್ತಿದ್ದ ಅಯ್ಯಪ್ಪಸ್ವಾಮಿ ಭಕ್ತರಿದ್ದ ಕ್ರೂಸರ್ ವಾಹನ ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸೇರಿ ನಾಲ್ವರು ಭಕ್ತರು ಮೃತಪಟ್ಟು, ೭ ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕೋರಾ ಪೊಲೀಸ್ ಠಾಣೆ ಸರಹದ್ದಿನ ವಸಂತನರಸಾಪುರ ಕೈಗಾರಿಕಾ ಪ್ರದೇಶ ಸಮೀಪ ರಾಷ್ಟ್ರೀಯ ಹೆದ್ದಾರಿ-೪೮ ರಲ್ಲಿಂದು ನಸುಕಿನಲ್ಲಿ ನಡೆದಿದೆ.
ಮೃತಪಟ್ಟವರನ್ನು ಕೊಪ್ಪಳ ಜಿಲ್ಲೆಯ ಕುಕನೂರು ಮತ್ತು ಯಲಬುರ್ಗಾ ಮೂಲದ ಗವಿಸಿದ್ದಪ್ಪ (೪೦), ಮಾರತಪ್ಪ (೩೫), ವೆಂಕಟೇಶಪ್ಪ (೩೦) ಹಾಗೂ ಸಾಕ್ಷಿ (೭) ಎಂದು ಗುರುತಿಸಲಾಗಿದೆ. ಪ್ರಶಾಂತ್, ಪ್ರವೀಣ್‌ಕುಮಾರ್, ರಾಜಪ್ಪ, ಉಲಗಪ್ಪ, ರಾಕೇಶ್, ತಿರುಪತಿ ಹಾಗೂ ಶ್ರೀನಿವಾಸ್ ಸೇರಿದಂತೆ ೭ ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಳೆದ ೪ ದಿನಗಳ ಹಿಂದೆ ೧೧ ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಕೊಪ್ಪಳ ಜಿಲ್ಲೆಯಿಂದ ಶಬರಿಮಲೈಗೆ ಕ್ರೂಸರ್ ವಾಹನದಲ್ಲಿ ತೆರಳಿದ್ದರು. ಶಬರಿಮಲೈನಲ್ಲಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ಊರಿಗೆ ವಾಪಸ್ಸಾಗುತ್ತಿದ್ದರು. ದುರಾದೃಷ್ಟವಶಾತ್ ಮುಂಜಾನೆ ಮಾರ್ಗಮಧ್ಯೆ ತಾಲ್ಲೂಕಿನ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ವಸತಂನರಸಾಪುರ ಕೈಗಾರಿಕಾ ಪ್ರದೇಶದ ಸಮೀಪವಿರುವ ಬೆಳ್ಳಾವಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-೪೮ ರಲ್ಲಿ ರಸ್ತೆಬದಿ ನಿಂತಿದ್ದ ಲಾರಿಗೆ ಅಯ್ಯಪ್ಪಸ್ವಾಮಿ ಭಕ್ತರಿದ್ದ ಈ ಕ್ರೂಸರ್ ವಾಹನ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ನಿಂತಿದ್ದ ಲಾರಿಯ ಹಿಂಬದಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಭೀಕರ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ-೪೮ ರಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಘಟನೆಯ ಸುದ್ದಿ ತಿಳಿದ ಕೂಡಲೇ ಕೋರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಅಸ್ತವ್ಯಸ್ತಗೊಂಡಿದ್ದ ವಾಹನ ಸಂಚಾರವನ್ನು ಸುಗಮಗೊಳಿಸಿದರು.
ಕ್ರೂಸರ್ ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದು ಶವಾಗಾರಕ್ಕೆ ಸಾಗಿಸಿದರು. ನಂತರ ತೀವ್ರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋರಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಡಿಷನಲ್ ಎಸ್ಪಿ ಗೋಪಾಲ್, ಪುರುಷೋತ್ತಮ್, ಡಿವೈಎಸ್ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.




























