Home ಜಿಲ್ಲೆ ಗರತಿಯ ಹಾಡುಗಳು ಮಾಯವಾಗುತ್ತಿರುವುದು ಕಳವಳಕಾರಿ

ಗರತಿಯ ಹಾಡುಗಳು ಮಾಯವಾಗುತ್ತಿರುವುದು ಕಳವಳಕಾರಿ

ವಿಜಯಪುರ, ಮಾ. 20: ಭಾರತ ಕಲೆ ಮತ್ತು ಸಂಸ್ಕøತಿಯ ತವರೂರು. ಅನೇಕತೆಯಲ್ಲಿ ಏಕತೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ರಾಷ್ಟ್ರ ನಮ್ಮದು. ಹಲವು ಸಂಸ್ಕೃತಿ, ಭಾಷೆ, ಧರ್ಮ, ವೇಷಭೂಷಣ ಮತ್ತು ಜಾನಪದ ಶೈಲಿ, ಜೀವನ-ಕಸುಬು ಹೀಗೆ ವೈವಿಧ್ಯಮಯ ಮತ್ತು ವೈಶಿಷ್ಟ್ಯಪೂರ್ಣವಾದ ಪವಿತ್ರ ಭೂಮಿ ನಮ್ಮದು. ಅದರಲ್ಲಿ ವಿಶೇಷವಾಗಿ ಭವ್ಯ ಪರಂಪರೆ, ಇತಿಹಾಸ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆ ಹೊಂದಿದ ನಮ್ಮ ಕರ್ನಾಟಕ ರಾಜ್ಯದಲ್ಲಿ ಸೋಬಾನ ಪದ, ಲಾಲಿ ಹಾಡು, ಬೀಸುವ ಕಲ್ಲಿನ ಪದ, ಹಂತಿ ಪದ, ಗೀಗಿ ಪದ, ತೊಟ್ಟೀಲು ಕಾರ್ಯಕ್ರಮದಲ್ಲಿ ಹಾಡುವ ಅನೇಕ ಗರತಿಯ ಹಾಡುಗಳು ವಿಶಿಷ್ಟ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಾಧ್ಯಾಪಕ ಗುರುಬಸಯ್ಯ ಹಿರೇಮಠ ಅವರು ಅಭಿಪ್ರಾಯಪಟ್ಟರು.
ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಹವಾಲ್ದಾರ ಕಾಲನಿಯ ಲಕ್ಷ್ಮಿ ದೇವಸ್ಥಾನದ 3ನೇ ವರ್ಷದ ಜಾತ್ರಾ ಮಹೋತ್ಸವದ “ಜನಪದ ಸಾಹಿತ್ಯಕ್ಕೆ ಸ್ತ್ರೀ ಕೊಡುಗೆಗಳು” ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಅತ್ತೀಯ ಮನಿಯಾಗ ಮುತ್ತಾಗಿ ಇರಬೇಕ, ಹೊತ್ತಾಗಿ ನೀಡಿದರ ಉಣಬೇಕ, ತವರೂರ, ಉತ್ತಮರ ಹೆಸರ ತರಬೇಕ ಎನ್ನುತ್ತಾ ತಾಯಿಯಾದವಳು ಮದುವೆಯಾಗಿ ಗಂಡನ ಮನೆ ಸೇರುತ್ತಿರುವ ತಮ್ಮ ಮಗಳಿಗೆ ಗಂಡನ ಮನೆಯಲ್ಲಿ ಹೇಗೆ ಇರಬೇಕು. ಗಂಡನ ಮನೆ ಮತ್ತು ತವರು ಮನೆಯ ಗೌರವ ಮತ್ತು ಮನೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಇದ್ದು ತಂದೆ-ತಾಯಿಯರ ಹೆಸರು ತರಬೇಕೆಂಬ ಕಿವಿಮಾತು ಹೇಳುತ್ತಿದ್ದಳು. ಗರತಿಯ ಹಾಡುಗಳು ನಮ್ಮ ನಾಡಿನ ಸ್ತ್ರೀ ಜೀವನದ ಒಳಗನ್ನಡಿ. ಅದು ನಮ್ಮ ಹೆಣ್ಣು ಮಕ್ಕಳ ಹೃದಯದ ಪಡಿಗನ್ನಡಿ ಇದ್ದಂತೆ. ಅದರಲ್ಲಿ ತಾಯಿ-ಮಗಳ, ಅಣ್ಣ-ತಮ್ಮಂದಿರ ನಡುವಿನ ಮಮತೆಯ ಮಾಧುರ್ಯ, ಗಂಡ-ಹೆಂಡಿರ ಸರಸ-ವಿರಸ ಮತ್ತು ಪ್ರೇಮ ಸತ್ವವು ಹಾಗೂ ಹೆಣ್ಣಿನ ತ್ಯಾಗ-ಬುದ್ಧಿಯು ತುಂಬಿ ತುಳುಕುತ್ತಿರುತ್ತದೆ. ಗರತಿಯ ಹಾಡುಗಳು ಹೆಣ್ಣಿನ ಜೀವನ ಜೀವಾಳವಾಗಿದ್ದು, ತ್ರಿಪದಿ ಸಾಹಿತ್ಯವು ಜನಪದ ಸಾಹಿತ್ಯಕ್ಕೆ ತಾಯಿ ಬೇರು ಆಗಿದೆ ಎಂದರು.
ಇನ್ನೋರ್ವ ಅತಿಥಿ ರಾಜಶೇಖರ ಉಮರಾಣಿ ಅವರು ಮಾತನಾಡಿ, ಇಂದಿನ ಪಾಶ್ಚಾತ್ಯ ಸಂಸ್ಕೃತಿ, ಸಮೂಹ ಮಾಧ್ಯಮಗಳು, ಟಿವ್ಹಿ. ಮೊಬೈಲ್, ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ ಹಿರಿಯರ ಮತ್ತು ಮಹಿಳೆಯರ ಅನುಭವದಿಂದ ರಚಿತವಾದ ಗರತಿ ಹಾಡುಗಳು ಮಾಯವಾಗುತ್ತಿರುವುದು ತೀರಾ ಕಳವಳಕಾರಿ ಸಂಗತಿ. ಆದ್ದರಿಂದ ನಮ್ಮ ಸಂಸ್ಕಾರ-ಸಂಸ್ಕೃತಿ, ಮೌಲ್ಯಗಳು, ಗ್ರಾಮೀಣ ಸೊಗಡು, ಪರಂಪರೆ, ಸಂಪ್ರದಾಯ ಮತ್ತು ಆಚರಣೆಗಳ ಬಗ್ಗೆ ಅರಿವು ಮೂಡಿಸುವ ಗರತಿಯ ಹಾಡುಗಳು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವಂತಾಗಬೇಕು. ಪ್ರತಿ ಮನೆಯಲ್ಲಿ ದೈನಂದಿನವಾಗಿ ಗರತಿ ಹಾಡುಗಳನ್ನು ಹಾಡುತ್ತ, ಸುಸಂಸ್ಕೃತ ಸಮಾಜ ನಿರ್ಮಾಣಕ್ಕಾಗಿ ನಾವೆಲ್ಲರೂ ಕಂಕಣಬದ್ಧರಾಗಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ರಾವಸಾಬ ಮೆಣಸಂಗಿ, ಶಿವಾನಂದ ಹಡಪದ, ಅಶೋಕ ಕಟಗಿಣ್ಣಿ, ಗುರುಬಸಯ್ಯ ಹಿರೇಮಠ ದಂಪತಿ, ವೈಶಾಲಿ ಕಾಮಗಳ, ಲಕ್ಷ್ಮಿ ಹಡಪದ ಮತ್ತು ದೇವಸ್ಥಾನದ ಅಧ್ಯಕ್ಷೆ ಶೋಭಾ ಚವ್ಹಾಣ, ಮತ್ತು ದೇಣಿಗೆ ನೀಡಿದ ದಾನಿಗಳನ್ನು ಮತ್ತು ದೇವಸ್ಥಾನದ ಯಶಸ್ಸಿಗೆ ಕಾರಣೀಕರ್ತರಾದ ಯುವ ಸದ್ಭಕ್ತರನ್ನು ಸನ್ಮಾನಿಸಲಾಯಿತು.
ಬಸವರಾಜ ಕುಂಬಾರ, ಡಾ, ರಾಜಕುಮಾರ ಜೊಳ್ಳಿ, ಸರೋಜಾ ಬಾಗಲಕೋಟ, ಶಶಿಕಲಾ ಸಿದರೆಡ್ಡಿ, ಆಶಾ ಬಾಸೂತಕರ, ಶ್ರೀದೇವಿ ಖೊದ್ನಾಪೂರ, ದಾನಮ್ಮ ಶೇಗಾವಿ, ಶಾಂತಾ ಹೆರಕಲ್, ಶಾಂತಾ ಕಪಾಳಿ, ಅಂಬಿಕಾ ರಜಪೂತ, ಶಾಂತಾಬಾಯಿ ದೊಡಮನಿ, ಲಲಿತಾ ಕಟ್ಟಿಮನಿ, ಪ್ರೇಮಾ ಕ್ಷತ್ರಿ, ಸುನಂದಾ ಕುಂಬಾರ, ಸಾವಿತ್ರಿ ಹಿರೇಮಠ ಇನ್ನಿತರರು ವೇದಿಕೆಯ ಮೇಲಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಮ್ಯಾ ಜಗತಾಪ ನೇತೃತ್ವದಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಜ್ಯೋತಿ ಹಿರೇಮಠ ಸ್ವಾಗತಿಸಿದರು.
ಶಿಕ್ಷಕಿ ಸಾವಿತ್ರಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಹೇಮಾ ಅಂಗಡಿ ವಂದಿಸಿದರು.