Home Lead News ಒಳಮೀಸಲಾತಿ ಗೊಂದಲ ಶೀಘ್ರ ಇತ್ಯರ್ಥ

ಒಳಮೀಸಲಾತಿ ಗೊಂದಲ ಶೀಘ್ರ ಇತ್ಯರ್ಥ

ತುಮಕೂರು, ಮಾ. ೧೪- ಒಳಮೀಸಲಾತಿಗಳ ಗೊಂದಲಗಳಿಗೆ ಈ ತಿಂಗಳ ೨೭ಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.


ರಾಜ್ಯದಲ್ಲಿ ಒಳಮೀಸಲಾತಿ ಜಾರಿ ವಿಚಾರ ಗೊಂದಲಕ್ಕೆ ಕಾರಣವಾಗಿದ್ದು ಈ ಗೊಂದಲಗಳಿಗೆ ಈ ತಿಂಗಳ ೨೭ ರಂದು ಪರಿಹಾರ ಕಂಡುಕೊಳ್ಳುವ ವಿಶ್ವಾಸವನ್ನು ಗೃಹ ಸಚಿವರು ವ್ಯಕ್ತಪಡಿಸಿದರು.


ಒಳಮೀಸಲಾತಿ ಜಾರಿ ಸಂಬಂಧ ಇದೇ ತಿಂಗಳ ೨೭ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಸಂಪುಟ ಸಭೆ ಕರೆದಿದ್ದು ಈ ಸಭೆಯಲ್ಲಿ ಎಲ್ಲ ಆಯಾಮಗಳಿಂದಲೂ ಚರ್ಚೆ ನಡೆಸಿ ಒಳಮೀಸಲಾತಿ ಜಾರಿ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತೇವೆ ಅವರು ಹೇಳಿದರು.

ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದು ಕೆಲಹೊತ್ತು ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.


ಒಳಮೀಸಲಾತಿ ಜಾರಿ ವಿಚಾರ ತೀರ್ಮಾನವಾದ ನಂತರ ಸರ್ಕಾರ ಆದೇಶ ಹೊರಡಿಸುತ್ತದೆ. ಸರ್ಕಾರಿ ಆದೇಶ ಹೊರ ಬಿದ್ದ ಬಳಿಕ ನೇಮಕಾತಿ ಪ್ರಕ್ರಿಯೆ ಆರಂಭವಾಗುತ್ತದೆ ಎಂದ ಅವರು, ಈಗಾಗಲೇ ನಾವು ೫೦ ಸಾವಿರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.


ಪೊಲೀಸ್ ಇಲಾಖೆಯಲ್ಲೇ ೮ ಸಾವಿರ ಹುದ್ದೆಗಳು ಖಾಲಿ ಇವೆ. ಸರ್ಕಾರದ ತೀರ್ಮಾನ ಹೊರ ಬಿದ್ದ ನಂತರ ತುರ್ತಾಗಿ ನೇಮಕಾತಿ ಪ್ರಕ್ರಿಯೆ ನಡೆಸುತ್ತೇವೆ ಎಂದು ಅವರು ತಿಳಿಸಿದರು.


ಕಾಳಸಂತೆಯಲ್ಲಿ ಸಿಲಿಂಡರ್ ಮಾರಿದರೆ ಕಠಿಣ ಕ್ರಮ


ಮಧ್ಯ ಪ್ರಾಂಚ್ಯ ದೇಶಗಳ ಯುದ್ಧದಿಂದಾಗಿ ವಾಣಿಜ್ಯ ಸಿಲಿಂಡರ್‌ಗಳಿಗೆ ಅಲ್ಪ ಪ್ರಮಾಣದಲ್ಲಿ ಸಮಸ್ಯೆ ಉಂಟಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಸಮಸ್ಯೆ ತಲೆದೋರಿಲ್ಲ. ವಾಣಿಜ್ಯ ಸಿಲಿಂಡರ್ ಸಮಸ್ಯೆಯಿಂದಾಗಿ ಹೋಟೆಲ್‌ನವರಿಗೆ ಒಂದೆರೆಡು ದಿನ ಸಮಸ್ಯೆ ಆಗಬಹುದು. ಆದರೆ ಇದನ್ನೇ ನೆಪ ಮಾಡಿಕೊಂಡು ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್ ಮಾರಾಟ ಮಾಡಲು ಮುಂದಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ತುಮಕೂರು ಜಿಲ್ಲೆಯಲ್ಲಿ ಸದ್ಯಕ್ಕೆ ಗ್ಯಾಸ್ ಸಮಸ್ಯೆ ಇಲ್ಲ. ಗೃಹ ಬಳಕೆಯ ಸಮಸ್ಯೆ ಮೊದಲೇ ಇಲ್ಲ. ಅಲ್ಲೊ.. ಇಲ್ಲೋ.. ವಾಣಿಜ್ಯ ಬಳಕೆ ಸಿಲಿಂಡರ್ ನ ಸಮಸ್ಯೆ ತಲೆದೋರಿದೆ ಎನ್ನುತ್ತಿದ್ದಾರೆ ಎಂದರು.


ಹಾಗೆಯೇ ಸಿದ್ದಗಂಗಾ ಮಠದಲ್ಲೂ ಸದ್ಯಕ್ಕಂತೂ ಸಿಲಿಂಡರ್ ಕೊರತೆ ಉಂಟಾಗಿಲ್ಲ. ಎರಡು-ಮೂರು ಶಿಫ್ಟ್ ಹಾರ್ಮೋಸ್ ಸ್ಟ್ರೀಟ್‌ನಿಂದ ಗ್ಯಾಸ್ ಪಾಸಾಗ್ತಾವೆ. ನಮ್ಮ ದೇಶಕ್ಕೆ ಯಾವುದೇ ರೀತಿ ರೀತಿಯ ತೊಂದರೆ ಇಲ್ಲದಂತೆ ಗ್ಯಾಸ್ ಪೂರೈಕೆಗೆ ಬಿಟ್ಟಿದ್ದಾರೆ. ಹಾಗಾಗಿ ನಮಗೆ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೇಗ ಬರುತ್ತದೆ. ಯಾವುದೇ ತೊಂದರೆ ಇಲ್ಲ ಎಂದರು.


ನಾನು ಇಂದು ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಭೇಟಿ ನೀಡಿ ದರ್ಶನ ಪಡೆದಿದ್ದೇನೆ. ಶ್ರೀಮಠ ಹಲವು ವರ್ಷಗಳಿಂದ ಧಾರ್ಮಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಮಾಡುತ್ತಿರುವುದು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.


ಮೊದಲಿನಿಂದಲೂ ನಮ್ಮ ಕುಟುಂಬ, ನಮ್ಮ ತಂದೆಯವರು ಶ್ರೀಮಠಕ್ಕೆ ನಡೆದುಕೊಳ್ಳುತ್ತೇವೆ. ಹಾಗಾಗಿ ಆಗಿಂದ್ದಾಗೆ ಮಠಕ್ಕೆ ಬಂದು ದರ್ಶನ ಮಾಡಿಕೊಂಡು ಹೋಗುತ್ತೇವೆ. ಅವರು ರಾಜಕೀಯವಾಗಿ ಯಾವುದೇ ಮಾರ್ಗದರ್ಶನ ಕೊಡುವುದಿಲ್ಲ. ದೊಡ್ಡ ಸ್ವಾಮೀಜಿಯವರು ಕೂಡ ರಾಜಕೀಯವಾಗಿ ನಾವು ಏನಾದರೂ ಕೇಳಿದರೆ ಮೌನ ವಹಿಸುತ್ತಿದ್ದರು. ಹಾಗೆಯೇ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ಅಷ್ಟೇ, ನಾವು ರಾಜಕೀಯ ಕೇಳಲ್ಲ ಅಕಸ್ಮಾತ್ ಮಾತನಾಡಿದರೆ ಮೌನ ವಹಿಸಿ ನಕ್ಕು ಬಿಡ್ತಾರೆ. ನಮಗೆ ಪದ್ಧತಿ, ಸ್ಫೂರ್ತಿ, ಮನಃಶಾಂತಿಗಾಗಿ ಇಲ್ಲಿಗೆ ಬರುತ್ತೇವೆ ಎಂದು ಅವರು ಹೇಳಿದರು.


ಮಾ. ೧೮ ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗುತ್ತಿದೆ. ಶ್ರೀಮಠದಲ್ಲಿ ೧೨೦೦ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಹಾಗಾಗಿ ಅವರನ್ನೆಲ್ಲಾ ಮಾತನಾಡಿಸಿ ಪರೀಕ್ಷೆಯನ್ನು ಚೆನ್ನಾಗಿ ಬರೆಯುವಂತೆ ಶುಭ ಕೋರಿದ್ದೇನೆ ಎಂದರು.

ವಡೇರಹಳ್ಳಿಯಲ್ಲಿ ಬಫರ್ ಡ್ಯಾಂ ನಿರ್ಮಾಣ


ಎತ್ತಿನ ಹೊಳೆಯ ಮೂಲ ಯೋಜನೆಯಂತೆ ವಡೇರಹಳ್ಳಿಯಲ್ಲೇ ಡ್ಯಾಂ ನಿರ್ಮಾಣ ಮಾಡಲಾಗುವುದು. ಇದು ವಡೇರಹಳ್ಳಿ, ತುಮಕೂರು ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಭಾಗವಾಗಿದೆ. ವಡೇರೆಹಳ್ಳಿಯ ಎರಡೂವರೆ ಹಾಗೂ ಚಿಕ್ಕಬಳ್ಳಾಪುರದ ಗಡಿಯ ಎರಡೂವರೆ ಒಟ್ಟು ೫ ಸಾವಿರ ಎಕರೆಯಲ್ಲಿ ಬಫರ್ ಡ್ಯಾಂ ನಿರ್ಮಾಣ ಮಾಡಲಾಗುತ್ತದೆ. ಆದರೆ ಹಿಂದಿನ ಬಿಜೆಪಿ ಸರ್ಕಾರ ಮೂಲ ಪ್ಲ್ಯಾನ್ ಬದಲಿಸಿ ಬೈರಗೊಂಡ್ಲುವಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿತ್ತು. ಆದರೆ ನಮ್ಮ ಸರ್ಕಾರ ಮೂಲ ಪ್ಲ್ಯಾನ್ ನಂತೆ ವಡೇರಹಳ್ಳಿಯಲ್ಲಿ ಮಾಡಲು ಬಜೆಟ್ ನಲ್ಲಿ ಘೋಷಣೆ ಮಾಡಿದ್ದೇವೆ ಎಂದರು.


ಇದಕ್ಕೆ ಸ್ಥಳೀಯರ ವಿರೋಧವಿದ್ದರೂ ಅವರನ್ನು ಕೂರಿಸಿ ಮಾತನಾಡಿಸಿ ಸಮಸ್ಯೆ ಬಗೆಹರಿಸುತ್ತೇವೆ. ಬೈರಗೊಂಡ್ಲು ರೈತರು ವಿರೋಧ ವ್ಯಕ್ತಪಡಿಸಿದ್ದರಿಂದ ಈಗ ವಡೇರಹಳ್ಳಿಯಲ್ಲೇ ನಿರ್ಮಾಣ ಮಾಡಲಾಗುತ್ತದೆ. ಒಂದೂವರೆ ಟಿಎಂಸಿ ನೀರನ್ನು ಅಲ್ಲಿ ಶೇಖರಣೆ ಮಾಡಲಾಗುತ್ತದೆ. ಏನಾದರೂ ಪ್ರಯತ್ನ ಮಾಡಿ ಅವರನ್ನು ಮನವೊಲಿಸಿ ಮಾಡುತ್ತೇವೆ. ಅವರಿಗೆ ಪರ್ಯಾಯವಾಗಿ ಏನಾದರೂ ಕಲ್ಪಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಅವರು ತಿಳಿಸಿದರು.