Home ಜಿಲ್ಲೆ ಸರ್ವೀಕಲ್ ಕ್ಯಾನ್ಸರ್ ತಡೆಗೆ ಹೆಚ್‌ಪಿವಿ ಲಸಿಕೆ:ಸಿಇಓ ಡಾ.ಗಿರೀಶ ಬದೋಲೆ

ಸರ್ವೀಕಲ್ ಕ್ಯಾನ್ಸರ್ ತಡೆಗೆ ಹೆಚ್‌ಪಿವಿ ಲಸಿಕೆ:ಸಿಇಓ ಡಾ.ಗಿರೀಶ ಬದೋಲೆ

ಬೀದರ, ಮಾ.೧೭:ಸರ್ವೀಕಲ್ ಕ್ಯಾನ್ಸರ್ ತಡೆಗಟ್ಟುವುದಕ್ಕಾಗಿ ೧೪ ವರ್ಷ ತುಂಬಿದ ೧೫ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಹೆಚ್.ಪಿ.ವಿ ಲಸಿಕೆ ನೀಡುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಹೇಳಿದರು.
ಅವರು ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ಸಂಯುಕ್ತಾಶ್ರಯದಲ್ಲಿ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರ ೧೦೦ ಹಾಸಿಗೆ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಹೆಚ್.ಪಿ.ವಿ ಲಸಿಕಾಕರಣ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಇಲಾಖೆಯಲ್ಲಿ ಪೋಲಿಯೋ ಲಸಿಕೆ ನೀಡಿ ಪೋಲಿಯೋ ನಿರ್ಮೂಲನೆ ಮಾಡಿದಂತೆ ಈ ಲಸಿಕೆ ನೀಡಿ ಹೆಣ್ಣು ಮಕ್ಕಳ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವುದಕ್ಕಾಗಿ ತಮ್ಮ ಮಕ್ಕಳಿಗೆ ಈ ಲಸಿಕೆ ನೀಡುವಂತೆ ಎಲ್ಲಾ ಪಾಲಕ, ಪೋಷಕರ ಹಾಗೂ ತಾಯಿಂದಿರ ಜವಾಬ್ದಾರಿಯಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಡಿ.ಡಿ.ಪಿ.ಐ ರವರು ಶಾಲೆಯಲ್ಲಿರುವ ೧೪ ವರ್ಷ ತುಂಬಿದ ೧೫ ವರ್ಷ ಒಳಗಿನ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಿಸಲು ಆರೋಗ್ಯ ಸಂಸ್ಥೆಗಳಿಗೆ ಕಳುಹಿಸುವಂತೆ ಕ್ರಮವಹಿಸಲು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ ಮಾತನಾಡಿ, ಇಲಾಖೆಯ ಮಾರ್ಗಸೂಚಿಯಂತೆ ಮೊದಲನೇ ಹಂತದಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ಲಸಿಕೆ ನೀಡಲಾಗುವುದು ಎಂದರು.
ಮಕ್ಕಳ ತಜ್ಞ ಡಾ.ವರ್ಷಾ ಮಾತನಾಡಿ, ಹೆಚ್.ಪಿ.ವಿ ಒಂದು ವೈರಸ್ ಇದು ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ, ಇಲಾಖೆಯ ಮಾರ್ಗಸೂಚಿಯಂತೆ ೧೪ ವರ್ಷ ತುಂಬಿದ ೧೫ ವರ್ಷ ಒಳಗಿನ ಹೆಣ್ಣು ಮಕ್ಕಳು ಮೊದಲು ಆಹಾರ ಸೇವಿಸಿದ ನಂತರ ಈ ಲಸಿಕೆ ತೆಗೆದುಕೊಳ್ಳುವುದು ಅವಶ್ಯಕವಾಗಿರುತ್ತದೆ ಎಂದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಶಿವಶಂಕರ.ಬಿ. ಮಾತನಾಡಿ, ಹೆಚ್.ಪಿ.ವಿ ಲಸಿಕೆ ಸುರಕ್ಷಿತವಾಗಿದ್ದು ೧೪ ವರ್ಷ ತುಂಬಿದ ೧೫ ವರ್ಷ ಒಳಗಿನ ಹೆಣ್ಣು ಮಕ್ಕಳ ಗರ್ಭ ಕಂಠದ ಕ್ಯಾನ್ಸರ್ ತಡೆಗಟ್ಟುವ ಕುರಿತು ಈ ಲಸಿಕೆ ನೀಡಲಾಗುವುದು. ಈ ಲಸಿಕೆ ಪಡೆದ ನಂತರ ಯು.ವಿನ್. ಪೋರ್ಟಲ್‌ನಿಂದ ಪ್ರಮಾಣಪತ್ರ ಪಡೆದುಕೊಳ್ಳಲು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ದಿಲೀಪ ಡೋಂಗರೆ, ಡಾ. ಕಿರಣ ಪಾಟೀಲ, ಡಾ. ಶಾಂತಲಿAಗ್ ಪಾಟೀಲ, ಉಮೇಶ ಬಿರಾದರ,. ಶಿವಶಂಕರ ಬೇಮಳಗಿ, ಗುರುನಾಥ ಕವಳೆ, ಓಂಕಾರ, ಲೋಕೇಶ, ಶಾಂತಾ, ಅಜಯ ಪಾಟೀಲ, ರವೀಂದ್ರ, ಅಬ್ರಹಾಮ, ಅನೀತಾ, ಅವಿನಾಶ ಹೆಚ್.ಐ.ಓ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಾಳೆ ಜನಸಂಪರ್ಕ ಸಭೆ

ಬೀದರ, ಮಾ.೧೭:ಬೀದರ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಔರಾದ(ಬಿ), ಭಾಲ್ಕಿ, ಬೀದರ, ಕಮಠಾಣ ಉಪ ವಿಭಾಗದಲಿ ಮಾರ್ಚ್. ೧೮ ರಂದು ಜನ ಸಂಪರ್ಕಸಭೆ ಹಾಗೂ ಕೆಇಆರ್‌ಸಿಯ (ಎಸ್.ಒ.ಪಿ) ಮಾನದಂಡಗಳನ್ನು ಕುರಿತು ಅರಿವು ಮೂಡಿಸುವಿಕೆ ಕಾರ್ಯಕ್ರಮವನ್ನು ಕಾರ್ಯನಿರ್ವಾಹಕ ಇಂಜಿನಿಯರರು(ವಿ),/ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಗುವಿಸಕಂನಿ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿರುತ್ತದೆ.
ಜನಸಂಪರ್ಕ ಸಭೆಗಳ ವಿವರ: ಮಾರ್ಚ್.೧೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಔರಾದ್ (ಬಿ) ಉಪ ವಿಭಾಗ ಕಛೇರಿಯಲ್ಲಿ, ಬೀದರ (ನಗರ) ಉಪ ವಿಭಾಗ ಕಛೇರಿಯಲ್ಲಿ, ಕಮಠಾಣ ಉಪ ವಿಭಾಗ ಕಛೇರಿಯಲ್ಲಿ ಹಾಗೂ ಮಧ್ಯಾಹ್ನ ೨.೩೦ ಗಂಟೆಗೆ ಭಾಲ್ಕಿ ಉಪ ವಿಭಾಗ ಕಛೇರಿಯಲ್ಲಿ ಬೀದರ (ಗ್ರಾಮೀಣ) ಉಪ ವಿಭಾಗ ಕಛೇರಿಯಲ್ಲಿ ಸಭೆಗಳು ನಡೆಯಲಿವೆ.
ಸಾರ್ವಜನಿಕರು ಹಾಗೂ ಗುವಿಸಕಂನಿ ಗ್ರಾಹಕರು ಸಭೆಯಲ್ಲಿ ಉಪಸ್ಥಿತರಿದ್ದು, ಕುಂದು ಕೊರತೆಯ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.