
ಕರಜಗಿ:ಅಫಜಲಪುರ ತಾಲೂಕಿನ ದಿಕ್ಸಂಗ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಬಡ ಕುಟುಂಬವೊಂದರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಗ್ರಾಮದ ಖಾದರ್ ಸಾಬ್ ತಂದೆ ಮೈಬೂಬ್ ಸಾಬ್ ಅವರಿಗೆ ಸೇರಿದ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಸುಮಾರು 7 ಗ್ರಾಂ ಚಿನ್ನ, ಜಾನುವಾರು ಮಾರಾಟ ಮಾಡಿದ್ದ 1.50 ಲಕ್ಷ ನಗದು ಹಣ, ಎರಡು ಚೀಲ ಜೋಳ, ಎರಡು ಚೀಲ ಗೋಧಿ ಸೇರಿದಂತೆ ಮನೆಯಲ್ಲಿದ್ದ ಬಟ್ಟೆಬರೆ, ಪಾತ್ರೆ ಹಾಗೂ ಇತರೆ ಗೃಹೋಪಯೋಗಿ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ.
ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಈ ಅಗ್ನಿ ಅವಘಡ ದೊಡ್ಡ ಆಘಾತ ನೀಡಿದೆ. ಮನೆ ಹಾಗೂ ಜೀವನಕ್ಕೆ ಆಧಾರವಾಗಿದ್ದ ವಸ್ತುಗಳನ್ನೆಲ್ಲ ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ದಿನ ಕಳೆಯುವಂತಾಗಿದೆ.
ಬಡ ಕುಟುಂಬವೊಂದು ಬೆಂಕಿ ಅವಘಡದಿಂದ ಸರ್ವಸ್ವ ಕಳೆದುಕೊಂಡಿದ್ದರೂ ಸಂತ್ರಸ್ತರ ನೆರವಿಗೆ ಅಧಿಕಾರಿಗಳು ಧಾವಿಸಿಲ್ಲವೇ ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಮೂಡಿದೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಸಮಗ್ರ ಪರಿಶೀಲನೆ ನಡೆಸಿ, ಸಂತ್ರಸ್ತ ಕುಟುಂಬಕ್ಕೆ ತಕ್ಷಣ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಹಾಗೂ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.





















