ಧಾರವಾಡ ಜಿಲ್ಲೆಯಾದ್ಯಂತ ಭಾರಿ ಮಳೆ : ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳಗಳು- ಜನಜೀವನ ಅಸ್ತವ್ಯಸ್ತ

ಹುಬ್ಬಳ್ಳಿ, ಜೂ 12: ಧಾರವಾಡ ಜಿಲ್ಲೆಯಾದ್ಯಂತ ಬಹುತೇಕ ಪ್ರದೇಶಗಳಲ್ಲಿ ನಿನ್ನೆ ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ಸಂಜೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗುಡುಗು ಸಹಿತ ಮಳೆ ತಡರಾತ್ರಿವರೆಗೂ ಸುರಿದು, ರಸ್ತೆಗಳು, ತಗ್ಗು ಪ್ರದೇಶಗಳು ಸೇರಿದಂತೆ ಕೆಲ ಮನೆಗಳಲ್ಲಿ ಹಾಗೂ ಅಪಾರ್ಟ್‍ಮೆಂಟ್‍ಗಳಲ್ಲಿ ನೀರು ನುಗ್ಗಿ ರಾತ್ರಿಯಿಡಿ ಜನತೆ ಪರದಾಡುವಂತಾಯಿತು. ಇಂದು ಬೆಳಿಗ್ಗೆ ಅಲ್ಲಲ್ಲಿ ಜಿಚಿ ಚಿಟಿ ಮಳೆ ಇದ್ದು, ಮೋಡಕವಿದ ವಾತಾವರಣವಿದೆ.

ಧಾರವಾಕಾರವಾಗಿ ಸುರಿದ ಮಳೆಗೆ ನಗರದ ನೇಕಾರನಗರದಲ್ಲಿ ವ್ಯಕ್ತಿಯೋರ್ವ ಚರಂಡಿಯಲ್ಲಿ ಕೊಚ್ಚಿಹೋಗಿದ್ದಾನೆ ಎನ್ನಲಾಗಿದ್ದು, ಆತನ ಶೋಧಕಾರ್ಯ ನಡೆದಿದೆ.

ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದ ಜಮೀನಿನಲ್ಲಿರುವ ಮನೆಗೆ ಬೆಣ್ಣಿಹಳ್ಳದ ನೀರು ನುಗ್ಗಿದ್ದು ಮನೆಯಲ್ಲಿ ಸಿಲುಕಿದ ನಾಲ್ವರನ್ನು ಜಿಲ್ಲಾಡಳಿತದಿಂದ ರಕ್ಷಣೆ ಮಾಡಲಾಯಿತು.

ಹವಾಮಾನ ಇಲಾಖೆಯ ಮೂನ್ಸೂಚನೆಯ ಪ್ರಕಾರ ಜಿಲ್ಲೆಗೆ ರೆಡ್ ಅಲರ್ಟ್ ಇರುವದರಿಂದ ಮತ್ತು ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿನ್ನೆ ಸಂಜೆಯಿಂದ ನಿರಂತರವಾಗಿ ಮತ್ತು ವ್ಯಾಪಕವಾಗಿ ಮಳೆ ಆಗುತ್ತಿರುವದರಿಂದ ಶಾಲಾ ಕಾಲೇಜು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಇಂದು ಜೂ.12 ರಂದು ಒಂದು ದಿನದ ರಜೆ ಘೋಷಿಸಿ, ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಈ ಕುರಿತು ಇಂದು ಪ್ರಕಟಣೆ ನೀಡಿರುವ ಅವರು, ಇಂದು ಹವಾಮಾನ ಇಲಾಖೆಯಿಂದ ಜಿಲ್ಲೆಗೆ ರೆಡ್ ಅಲರ್ಟ್ ಸೂಚಿಸಲಾಗಿದೆ. ಮಳೆಯೂ ನಿರಂತರವಾಗಿ ಆಗುತ್ತಿರುವದರಿಂದ ಅನೇಕ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಅವರು ತಿಳಿಸಿದ್ದಾರೆ.

ಎಲ್ಲ ಇಲಾಖೆ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇದ್ದು, ಮಳೆ, ಪ್ರವಾಹದಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಈ ಕುರಿತು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿನ್ನೆ ರಾತ್ರಿ ಸುರಿದ ಮಳೆಗೆ ನಗರದ ಲ್ಯಾಮಿಂಗ್ಟನ್ ರಸ್ತೆ, ಕೊಪ್ಪಿಕರ ರಸ್ತೆ, ದಾಜಿಬಾನಪೇಟೆ, ಕಮರಿಪೇಟ್, ಹಳೆಹುಬ್ಬಳ್ಳಿ, ವಿದ್ಯಾನಗರ, ಉಣಕಲ್ ಪ್ರದೇಶಗಳು ಸೇರಿದಂತೆ ಬಹುತೇಕ ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡು ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು. ರಾತ್ರಿಯಿಂದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿನ ಕಾಂಪ್ಲೆಕ್ಸ್‍ಗಳಲ್ಲಿ ಮಳೆ ನೀರು ನುಗ್ಗಿ ವ್ಯಾಪಾರಸ್ತರು ಪರದಾಡುವಂತಾಯಿತು. ನಗರದ ಪ್ರಮುಖ ರಾಜಕಾಲುವೆಗಳು ತುಂಬಿ ಹರಿಯುತ್ತಿವೆ. ಉಣಕಲ್ ಕೆರೆ ಸಹ ತುಂಬಿ ಹರಿಯುತ್ತಿದೆ. ಕೆಲ ಪ್ರಮುಖ ರಸ್ತೆಗಳಲ್ಲಿ ಗಟಾರು ಹಾಗೂ ಚರಂಡಿ ನೀರು ಹರಿದು, ಸಾರ್ವಜನಿಕರ ಸಂಚಾರಕ್ಕೆ ಅಡತಡೆ ಉಂಟಾಯಿತು.

ನವಲಗುಂದ ತಾಲೂಕಿನಲ್ಲಿ ಮಳೆ ಆರ್ಭಟಕ್ಕೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆಗೆ ಗೌರಿಹಳ್ಳ ತುಂಬಿ ಹರಿಯಿತು. ಕೆಲ ಕಡೆಗಳಲ್ಲಿ ರಸ್ತೆ ಸಂಚಾರ ಕಡಿತಗೊಂಡಿತ್ತು. ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶೆಟ್ಟರ್ ಕೆರೆ ಬಳಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ತಾಲೂಕಿನ ಯಮನೂರ ಗ್ರಾಮದಲ್ಲಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿ ನೀರು ನುಗ್ಗಿದ ಹಿನ್ನೆಲೆ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಯಿಂದ ನೀರು ಹೊರ ಹಾಕಲು ಜನರು ಹರಸಾಹಸಪಟ್ಟರು.