Home ಮುಖಪುಟ ಸುದ್ದಿ ಜ್ಞಾನವಾಪಿ, ಮಥುರಾ, ಸಂಭಲ್ ವಿವಾದಗಳು ವಿಶೇಷ ಲೋಕ್ ಅದಾಲತ್‌ಗೆ ವರ್ಗಾವಣೆ

ಜ್ಞಾನವಾಪಿ, ಮಥುರಾ, ಸಂಭಲ್ ವಿವಾದಗಳು ವಿಶೇಷ ಲೋಕ್ ಅದಾಲತ್‌ಗೆ ವರ್ಗಾವಣೆ

ಸುಪ್ರೀಂನಿಂದ ಐತಿಹಾಸಿಕ ಹೆಜ್ಜೆ

ನವದೆಹಲಿ,ಜು.೧೩: ದೇಶದ ಅತ್ಯಂತ ಸೂಕ್ಷ್ಮ ಧಾರ್ಮಿಕ ವಿವಾದಗಳಾದ ವಾರಾಣಸಿಯ ಜ್ಞಾನವಾಪಿ ಮಸೀದಿ, ಮಥುರಾದ ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ಮತ್ತು ಸಂಭಲ್‌ನ ಹರಿಹರ ಮಂದಿರ-ಜಾಮಾ ಮಸೀದಿ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್‌ಗೆ ಒಪ್ಪಿಸಿದೆ. ದೀರ್ಘಕಾಲದ ನ್ಯಾಯಾಲಯದ ಹೋರಾಟದ ಬದಲು, ಪರಸ್ಪರ ಮಾತುಕತೆ ಮತ್ತು ಸೌಹಾರ್ದಯುತ ಒಪ್ಪಂದದ ಮೂಲಕ ಈ ವಿವಾದಗಳನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಸುಪ್ರೀಂ ಕೋರ್ಟ್ ಆವರಣದಲ್ಲಿ ಆಗಸ್ಟ್ ೨೧ ರಿಂದ ೨೩ ರವರೆಗೆ “ಸಮಾಧಾನ ಸಮಾರೋಹ” ಹೆಸರಿನಲ್ಲಿ ಈ ರಾಜಿ ಸಂಧಾನ ಪ್ರಕ್ರಿಯೆ ನಡೆಯಲಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಈಗಾಗಲೇ ನೋಟಿಸ್ ಜಾರಿ ಮಾಡಿದೆ.

ವಿಶೇಷ ಲೋಕ್ ಅದಾಲತ್‌ಗೂ ಮುನ್ನವೇ ಪೂರ್ವ ಸಮಾಲೋಚನಾ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಏಪ್ರಿಲ್ ೨೧ ರಿಂದಲೇ ಕೆಳ ನ್ಯಾಯಾಲಯಗಳಲ್ಲಿ ಸಂಧಾನದ ಪ್ರಯತ್ನಗಳು ನಡೆಯುತ್ತಿವೆ. ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ ೧೪ ರಂದು ವಾರಾಣಸಿಯಲ್ಲಿ ಪೂರ್ವ ಸಮಾಲೋಚನಾ ಸಭೆ ನಡೆಯಲಿದೆ. ಇನ್ನು ಮಥುರಾ ವಿವಾದಕ್ಕೆ ಸಂಬಂಧಿಸಿದಂತೆ ಜುಲೈ ೫ ರಂದು ನಡೆದ ಸಂಧಾನದ ಪ್ರಯತ್ನಗಳು ವಿಫಲವಾಗಿದ್ದರಿಂದ, ಈ ಪ್ರಕರಣವನ್ನೂ ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ವ್ಯಾಪ್ತಿಗೆ ಸೇರಿಸಿದೆ.

ಮೊಘಲ್ ಕಾಲದ ಶಾಹಿ ಜಾಮಾ ಮಸೀದಿಯು ಮೂಲತಃ ಹರಿಹರ ದೇವಾಲಯವಾಗಿತ್ತು ಎಂಬ ಅರ್ಜಿಯ ಆಧಾರದ ಮೇಲೆ ಇತ್ತೀಚೆಗೆ ಸಿವಿಲ್ ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತ್ತು. ಕಳೆದ ವರ್ಷದ ನವೆಂಬರ್‌ನಲ್ಲಿ ಈ ಸಮೀಕ್ಷೆಯ ವೇಳೆ ಸಂಭಲ್‌ನಲ್ಲಿ ಹಿಂಸಾಚಾರ ನಡೆದು ಸಾವು-ನೋವುಗಳು ಸಂಭವಿಸಿದ್ದವು.
ಸುಪ್ರೀಂ ಕೋರ್ಟ್ ಸದ್ಯ ಈ ಮೂರು ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದು, ೧೯೪೭ ಆಗಸ್ಟ್ ೧೫ ರಲ್ಲಿದ್ದ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಬದಲಾಯಿಸುವುದನ್ನು ನಿಷೇಧಿಸುವ ’ಧಾರ್ಮಿಕ ಆರಾಧನಾ ಸ್ಥಳಗಳ (ವಿಶೇಷ ನಿಯಮಗಳು) ಕಾಯ್ದೆ, ೧೯೯೧’ ರ ಅನ್ವಯ ಮತ್ತು ಅದರ ವ್ಯಾಖ್ಯಾನದ ಕುರಿತು ಕಾನೂನು ಪರಿಶೀಲನೆ ನಡೆಸುತ್ತಿದೆ.

ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿಗಳಿಗೇ ಧಮಕಿ ಹಾಕಿ, ಕಾಗದ ಪತ್ರ ಎಸೆದ ಅರ್ಜಿದಾರನ ವಿರುದ್ಧ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ರಘುವಂಶಿ ಅವರ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಮೇಘಾಲಯ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.