ಇನ್ಮುಂದೆ ಹಳದಿ ಮೆಟ್ರೊದಲ್ಲಿ 15 ನಿಮಿಷಕ್ಕೊಂದು ರೈಲು

ಬೆಂಗಳೂರು, ಆ.18- ಹಳದಿ ಮೆಟ್ರೊ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಸಿಹಿ ಸುದ್ದಿ ನೀಡಿದೆ. ಈ ಮಾರ್ಗದಲ್ಲಿ 15 ನಿಮಿಷಕ್ಕೊಂದು ಸಂಚರಿಸಲಿದೆ.ಇದರಿಂದಾಗಿ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ದೊರೆಯಲಿದೆ.


ಕಳೆದೊಂದು ವಾರದ ಹಿಂದಷ್ಟೇ ಬಹುನಿರೀಕ್ಷಿತ ಹಳದಿ ಮೆಟ್ರೋ ಮಾರ್ಗ ಆರಂಭವಾಗಿತ್ತು. ಆದರೆ ಪೂರ್ಣ ಪ್ರಮಾಣದ ರೈಲುಗಳು ಬರದಿರುವ ಕಾರಣ ಅರ್ಧ ಗಂಟೆಗೊಮ್ಮೆ ಸಿಗುವ ರೈಲಿನಲ್ಲೇ ಸವಾರರು ಹೈರಾಣಾಗಿ ಓಡಾಟ ಮಾಡುತ್ತಿದ್ದಾರೆ.


ಹೀಗಾಗಿ ಈ ಮಾರ್ಗದ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್ ನೀಡಿದ್ದು, ಶೀಘ್ರದಲ್ಲೇ ಹೆಚ್ಚುವರಿ ರೈಲಿನ ಟೆಸ್ಟಿಂಗ್ ಆರಂಭಿಸಲಿದೆ.


ಸದ್ಯ ಈ ಮಾರ್ಗದಲ್ಲಿ ಮೂರು ಸೆಟ್ ರೈಲು ಮಾತ್ರ ಓಡಾಟ ಮಾಡುತ್ತಿರುವ ಕಾರಣ ಪ್ರತಿ 25 ನಿಮಿಷಕ್ಕೊಂದು ರೈಲು ಸಂಚರಿಸುತ್ತಿವೆ. ಇದರಿಂದಲೇ ಈ ಮಾರ್ಗದಲ್ಲಿ ಅತಿ ಹೆಚ್ಚು ಜನಸಂದಣಿ ಉಂಟಾಗುತ್ತಿದೆ. ಸದ್ಯ ನಾಲ್ಕನೇ ರೈಲಿನ ಆರು ಬೋಗಿಗಳು ಹೆಬ್ಬಗೋಡಿ ಡಿಪೋ ತಲುಪಿವೆ. ರೈಲನ್ನು ಸ್ಥಿರ ಪರೀಕ್ಷೆಗಳಿಗಾಗಿ ಕೊಂಡೊಯ್ಯಲಾಗಿದೆ.


ಇದೇ ವಾರ ಡೈನಾಮಿಕ್ ಪರೀಕ್ಷೆಗಾಗಿ ಇದನ್ನು ಹಳದಿ ಮಾರ್ಗದ ಹಳಿಗಳಲ್ಲಿ ಓಡಿಸುವ ಸಾಧ್ಯತೆ ಇದೆ. ಕನಿಷ್ಠ ಎರಡು ವಾರಗಳ ಕಾಲ ಹೊಸ ರೈಲಿನ ಪರೀಕ್ಷೆಗೆ ಸಮಯ ಬೇಕಿದೆ. ಟ್ರ‍್ಯಾಕ್ ಪರೀಕ್ಷೆ ಸಂಪೂರ್ಣವಾಗಿ ಯಶಸ್ಸು ಕಂಡರೆ ಮುಂದಿನ ವಾರಂತ್ಯಕ್ಕೆ ಹೊಸ ರೈಲು ಕೂಡ ಮಾರ್ಗಕ್ಕೆ ಇಳಿಯುವ ನಿರೀಕ್ಷೆಯಿದೆ.


ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದ್ದು, ರೈಲಿಗೆ ಕಾಯುವ ಪ್ರಯಾಣಿಕರ ಸಮಸ್ಯೆಗೆ ಬ್ರೇಕ್ ಬೀಳಲಿದೆ. ಸಮಯ ಕಡಿತವಾದರೆ ಪ್ರಯಾಣಿಕರ ಸಂಖ್ಯೆ ಕೂಡ ಏರಿಕೆಯಾಗಲಿದೆ.