ಅಕ್ರಮ ಚಟುವಟಿಕೆ ನಿಯಂತ್ರಿಸುವಲ್ಲಿ ವಿಫಲ: ನಾಲ್ವರ ಅಮಾನತು

ಯಾದಗಿರಿ,ಫೆ.7-ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳ ವಿರುದ್ಧ ಜಿಲ್ಲಾ ಪೆÇಲೀಸ್ ಇಲಾಖೆ ಗಂಭೀರ ನಿಲುವು ತಾಳಿದ್ದು, ನಿರ್ಲಕ್ಷ್ಯ ತೋರಿದ ಪೆÇಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಂಡಿದೆ.
ಸುರಪುರ ತಾಲೂಕು ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಣೆ, ಇಸ್ಪೀಟು, ಮಟ್ಕಾ ಸೇರಿದಂತೆ ವಿವಿಧ ಅಕ್ರಮ ಧಂದೆಗಳನ್ನು ತಡೆಗಟ್ಟುವಂತೆ ಜಿಲ್ಲಾ ಪೆÇಲೀಸ್ ಅಧೀಕ್ಷಕ (ಎಸ್ಪಿ) ಪೃಥ್ವಿಕ್ ಶಂಕರ್ ಹಲವಾರು ಬಾರಿ ಸಂಬಂಧಿತ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದರು.
ಆದಾಗ್ಯೂ, ಮೇಲಾಧಿಕಾರಿಗಳ ನಿರ್ದೇಶನಗಳನ್ನು ಸಮರ್ಪಕವಾಗಿ ಪಾಲಿಸದೇ, ಅಕ್ರಮ ಚಟುವಟಿಕೆಗಳ ನಿಯಂತ್ರಣದಲ್ಲಿ ವಿಫಲರಾಗಿರುವುದು ಗಮನಕ್ಕೆ ಬಂದ ಹಿನ್ನೆಲೆ ಶಿಸ್ತು ಕ್ರಮ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸುರಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಪೆÇಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಅಮಾನತ್ತುಗೊಂಡವರಲ್ಲಿ ನಿಂಗಪ್ಪ (ಎಎಸ್‍ಐ), ಬಲರಾಮ (ಎಎಸ್‍ಐ), ತಾಯಣ್ಣ (ಪಿಸಿ), ಲಕ್ಷ್ಮಣ (ಪಿಸಿ) ಸೇರಿದ್ದಾರೆ. ಇಲಾಖಾ ನಿಯಮಾವಳಿಗಳ ಪ್ರಕಾರ ಮುಂದಿನ ತನಿಖೆ ಪೂರ್ಣಗೊಳ್ಳುವವರೆಗೆ ಇವರು ಅಮಾನತ್ತು ಸ್ಥಿತಿಯಲ್ಲೇ ಇರಲಿದ್ದಾರೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ಚಟುವಟಿಕೆಗಳು ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಿಂದ, ಜನಪ್ರತಿನಿಧಿಗಳಿಂದ ಹಾಗೂ ವಿವಿಧ ಸಂಘಟನೆಗಳಿಂದ ದೂರಿಗಳು ಬರುತ್ತಿದ್ದವು. ನದಿ ತೀರ ಪ್ರದೇಶಗಳಲ್ಲಿ ಅಕ್ರಮವಾಗಿ ಮರಳು ಎತ್ತುವುದು, ರಾತ್ರಿ ವೇಳೆ ಅಕ್ರಮ ಸಾಗಣೆ ನಡೆಸುವುದು, ರಾಜಸ್ವಕ್ಕೆ ನಷ್ಟ ಉಂಟುಮಾಡುವುದರ ಜೊತೆಗೆ ಪರಿಸರ ಹಾನಿಗೂ ಕಾರಣವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಪೃಥ್ವಿಕ್ ಶಂಕರ್ ಅಕ್ರಮ ಧಂದೆಗಳಿಗೆ ಕಡಿವಾಣ ಹಾಕಲು ವಿಶೇಷ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಸೂಚಿಸಿದ್ದರು.
ಇದರ ಜೊತೆಗೆ ಇಸ್ಪೀಟು ಅಡ್ಡೆಗಳು, ಮಟ್ಕಾ ಜೂಜಾಟ, ಇತರೆ ಅಕ್ರಮ ಚಟುವಟಿಕೆಗಳ ವಿರುದ್ಧವೂ ನಿಯಮಿತ ದಾಳಿ ನಡೆಸುವಂತೆ ಸೂಚಿಸಲಾಗಿತ್ತು. ಆದರೂ ನೆಲಮಟ್ಟದಲ್ಲಿ ನಿರೀಕ್ಷಿತ ಮಟ್ಟದ ಕ್ರಮ ಜರುಗದಿರುವುದು ಮೇಲಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
“ಅಕ್ರಮ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಜನರ ವಿಶ್ವಾಸ ಕಾಪಾಡುವುದು ಪೆÇಲೀಸ್ ಇಲಾಖೆಯ ಪ್ರಮುಖ ಹೊಣೆ. ಸೂಚನೆಗಳನ್ನು ಪಾಲಿಸದವರು ಯಾರೇ ಆಗಿರಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ” ಎಂದು ಎಸ್ಪಿ ಪೃಥ್ವಿಕ್ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಎಸ್ಪಿ ಕೈಗೊಂಡಿರುವ ದಿಟ್ಟ ಕ್ರಮಕ್ಕೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಕ್ರಮ ಮರಳು ಮಾಫಿಯಾ ಹಾಗೂ ಇತರೆ ಅಕ್ರಮ ಧಂದೆಗಳಿಗೆ ಇದು ತೀವ್ರ ಎಚ್ಚರಿಕೆಯ ಸಂದೇಶವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕಾರ್ಯಾಚರಣೆಗಳು ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.