
ಔರಾದ್ : ಅನಾಥ, ನಿರ್ಗತಿಕ ಹಾಗೂ ಪರಿತ್ಯಕ್ತ ಮಕ್ಕಳಿಗೂ ಕೂಡ ಪ್ರೀತಿ, ವಾತ್ಸಲ್ಯ, ಮಮತೆ ನೀಡಬೇಕು. ಅನಾಥ ಮಕ್ಕಳನ್ನು ಕಾನೂನಾತ್ಮಕವಾಗಿ ದತ್ತು ತೆಗೆದುಕೊಳ್ಳುವ ಕುರಿತು ಮಾಹಿತಿ ನೀಡಬೇಕು ಎಂದು ಜಿಲ್ಲಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಾರದಾ ಎನ್, ಕಲ್ಮಲಕರ್ ಹೇಳಿದರು.
ತಾಲೂಕಿನ ಅಶೋಕ ನಗರ ತಾಂಡಾದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ ಹಾಗೂ ಲಂಬಾಣಿ ಮಹಿಳೆಯರಿಂದ ಜರುಗಿದ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷ ಅಗತ್ಯತೆಯುಳ್ಳ ಮಕ್ಕಳನ್ನು ದತ್ತು ತೆಗೆದುಕೊಂಡು ಹೊಸ ಬದುಕಿಗೆ ಅವಕಾಶ ಮಾಡಿಕೊಡಲು ಜನತೆಯು ಮುಂದೆ ಬರಲು ಜನಜಾಗೃತಿ ನೀಡಬೇಕು ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ ಬಾಳುವಾಳೆ, ಮಾತನಾಡಿ, ಯಾವುದೋ ಕಾರಣ, ಸಂದಿಗ್ಧ ಸನ್ನಿವೇಶಗಳಿಂದ ಕಂದಮ್ಮಗಳನ್ನು ಬೀದಿ, ತಿಪ್ಪೆ, ಕಾಲುವೆ ಬದಿ ಬಿಟ್ಟುಹೋಗುವ ಹಲವಾರು ಉದಾಹರಣೆಗಳಿವೆ. ಇಂತಹ ಸಂದರ್ಭದಲ್ಲಿ ೧೦೯೮ಗೆ ಕರೆಮಾಡಿ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿ ಮಗುವನ್ನು ಒಪ್ಪಿಸಿದಲ್ಲಿ ಮಕ್ಕಳನ್ನು ಸಾಕುವ ಅದೆಷ್ಟೊ ಪಾಲಕರಿಗೆ ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ-೨೦೧೫ ರಡಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಮಾರ್ಗಸೂಚಿಯನ್ವಯ ದತ್ತು ನೀಡಲಾಗುತ್ತಿದೆ. ದಯವಿಟ್ಟು ಯಾರೂ ನವಜಾತ ಶಿಶು ಹಾಗೂ ಮಕ್ಕಳನ್ನು ಅನಾಥವಾಗಿಸಬೇಡಿ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆ ಶಿವಮಂಗಲಾ ಪ್ರತಿಜ್ಞಾವಿಧಿ ಭೋಧಿಸಿದರು. ನಂತರ ಲಂಬಾಣಿ ಮಹಿಳೆಯರಿಂದ ರಾಷ್ಟ್ರೀಯ ದತ್ತು ಮಾಸಾಚರಣೆ ಜಾಗೃತಿ ಜಾಥಾ ಜರುಗಿತು. ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಚಂದ್ರ ಮಹಾರಾಜ್, ಮುಖ್ಯಗುರು ಶಿವಾಜಿ ಚವ್ಹಾಣ, ಸಿಡಿಪಿಒ ಶ್ರೀನಿವಾಸ ಬಾಳುವಾಲೆ, ಪಿಎಸ್ಐ ಚಂದ್ರಶೇಖರ್ ನಿರ್ಣೆ, ಪ್ರಶಾಂತ ಬಿರಾದರ್, ಸಂಗೀತಾ, ಶೋಭಾ ರಾಠೋಡ್, ಶಿವಮಂಗಲಾ, ಸುನೀಲ ಕುಮಾರ, ಇದ್ದರು.





















