ಯೋಗ ಸಾಧನೆಯಿಂದ ಆತ್ಮದ ಉತ್ಖನನ : ಹಾರಕೂಡ ಶ್ರೀ

ಬಸವಕಲ್ಯಾಣ: ಜೂ.22:ಕ್ರಮಬದ್ಧವಾದ, ನಿರಂತರವಾದ ಯೋಗ ಸಾಧನೆಯಿಂದ ಮನುಷ್ಯ ತನ್ನಾತ್ಮದ ಉತ್ಖನನ ಪ್ರಕ್ರಿಯೆಯಲ್ಲಿ ತೊಡಗಿ, ಪ್ರಜ್ಞೆಯ ಬೆಳಕಿನಲ್ಲಿ ಬದುಕಿನ ನೈಜ ಧ್ಯೇಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದ ಶ್ರೀ ಚನ್ನ ರೇಣುಕ ಬಸವ ಮಂಟಪದಲ್ಲಿ ಶ್ರೀ ಮಠದ ವತಿಯಿಂದ ಆಯೋಜಿಸಿದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸನ್ನಿಧಾನ ವಹಿಸಿ ಮಾತನಾಡಿದ ಶ್ರೀಗಳು, ದೇಹ ಮನಸ್ಸುಗಳ ಸ್ವಾಸ್ಥ್ಯವನ್ನು ಸಮತೋಲನದಲ್ಲಿಡಲು ಯೋಗ ಅದ್ಭುತ ಸಾಧನವಾಗಿದ್ದು, ಚಾರಿತ್ರ್ಯ ಶುದ್ದಿಯ ಪ್ರಧಾನ ಅಂಗವೂ ಆಗಿದೆ.
ಮನುಷ್ಯನ ದೇಹಬಲ ಹಾಗೂ ನೈತಿಕ ಬಲ ಸೊರಗದಂತೆ ಯೋಗ ಕಾಪಾಡುತ್ತದೆ.
ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತವಾಗದೆ ನಮ್ಮ ಜೀವನದ ಅಂಗವಾಗಬೇಕು.
ವೈಯಕ್ತಿಕ ಆರೋಗ್ಯದಿಂದ ವಿಶ್ವದ ಆರೋಗ್ಯ ಸಾಧಿಸುವ ಶುಭದೃಷ್ಟಿ ಹೊಂದಿರುವುದು ಇಂದಿನ ತುರ್ತು ಅಗತ್ಯವಾಗಿದೆ.
11ನೇ ವಿಶ್ವ ಯೋಗ ದಿನಾಚರಣೆ ಸದೃಢ ಹಾಗೂ ಸಮರ್ಥ ಭಾರತ ಕಟ್ಟುವ ಸಂಕಲ್ಪದ ದಿನವಾಗಲಿ, ನಮ್ಮ ರಾಷ್ಟ್ರದ ಅಂತ:ಶಕ್ತಿ ವಿಶ್ವದ ಮುನ್ನಡೆಗೆ ಪ್ರೇರಣೆಯಾಗಲಿ ಎಂಬುವುದೇ ನಮ್ಮ ಹಿರಿದಾಸೆಯಾಗಿದೆ ಎಂದು ನುಡಿದರು.
ಈ ನಿಟ್ಟಿನಲ್ಲಿ ಡಾ. ಬಸವರಾಜ ಸ್ವಾಮಿ ಅವರ ಯೋಗ ಸೇವೆ ಸಾರ್ಥಕವಾಗಲಿ, ಹಾರಕೂಡಧೀಶ ಸರ್ವರಿಗೂ ಆರೋಗ್ಯಭಾಗ್ಯ ದಯಪಾಲಿಸಲಿ ಎಂದು ಶುಭ ಹಾರೈಸಿದರು.
ಯೋಗ ಗುರು ಡಾ. ಬಸವರಾಜ ಸ್ವಾಮಿ ತ್ರಿಪೂರಾಂತ ಮಾತನಾಡಿ, ಯೋಗ ಮತ್ತು ಆರೋಗ್ಯದ ಬಗ್ಗೆ ತಿಳಿಸಿಕೊಟ್ಟರು.
ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಪಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ವಿಜಯಕುಮಾರ ಸಂಗೋಳಗೆ, ಸೂರ್ಯಕಾಂತ ಮಠ, ಐ.ಜಿ. ಮಠಪತಿ, ಅಲ್ಲಮ ಪ್ರಭು ಹಿರೇಮಠ, ಪಂಡಿತರಾವ ದೇಗಾಂವ, ಶಿವಶರಣ ಚೌದರಿ, ಕಾಶಪ್ಪ ದೇಗಾಂವ ಉಪಸ್ಥಿತರಿದ್ದರು.
ಶ್ರದ್ಧಾ ಪಾಟೀಲ ಯೋಗಾಸನ ಪ್ರದರ್ಶನ ಮಾಡಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.
ಅಂಬರಾಯ ಉಗಾಜಿ ನಿರೂಪಣೆ ಮಾಡಿದರು.
ನವಲಿಂಗ ಪಾಟೀಲ ವಂದಿಸಿದರು.
ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆ ಮಕ್ಕಳು ಭಾಗವಹಿಸಿದ್ದರು.