
ದೇವನಹಳ್ಳಿ.ಮೇ೪:ಶ್ರಮಿಕ ವರ್ಗದವರು ಹಾಗೂ ಅವರ ಅವಲಂಬಿತರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಇಎಸ್‌ಐಸಿ ಆಸ್ಪತ್ರೆಯು ವರದಾನವಾಗಲಿದೆ. ಎಲ್ಲಾ ಕಾರ್ಮಿಕರು ವೈದ್ಯಕೀಯ ಸೇವೆಯ ಸದುಪಯೋಗ ಪಡೆಯಬೇಕು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ೧೦೦ ಹಾಸಿಗೆ ಸಾಮರ್ಥ್ಯದ ಇಎಸ್‌ಐಸಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯೇ ಕೇಂದ್ರ ಸರ್ಕಾರದ ಮೂಲಮಂತ್ರವಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಸುಮಾರು ೧೦೧ ಕೋಟಿ ರೂ. ವೆಚ್ಚದಲ್ಲಿ ಇಎಸ್‌ಐಸಿ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಜತೆಗೆ ಬಳ್ಳಾರಿಯಲ್ಲಿ ಸುಮಾರು ೧.೫ ಲಕ್ಷ ಜವಳಿ ಕಾರ್ಮಿಕರಿಗಾಗಿ ?೧೫೦ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಇಎಸ್‌ಐಸಿ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಕಾರ್ಮಿಕರ ಘನತೆ ಮತ್ತು ಅವರಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ಅಚಲ ಬದ್ಧತೆಯನ್ನು ಹೊಂದಿದೆ ಎಂದರು.
ಕೇಂದ್ರ ಸರ್ಕಾರವು ಇಎಸ್‌ಐಸಿ ಆಸ್ಪತ್ರೆ ಮೂಲಕ ಕಾರ್ಮಿಕರಿಗೆ ಆರ್ಥಿಕ ಹೊರೆ ತಗ್ಗಿಸಿ ಗುಣಮಟ್ಟದ ಉಚಿತ ಆರೋಗ್ಯ ಸೇವೆ ಹಾಗೂ ಹೊಸ ಕಾರ್ಮಿಕ ಸಂಹಿತೆಯಡಿ ಲಿಂಗ ತಾರತಮ್ಯವಿಲ್ಲದೇ ಸಮಾನ ಕೆಲಸಕ್ಕೆ ಸಮಾನ ವೇತನ ಸಹ ನೀಡುತ್ತಿದ್ದೇವೆ ತಿಳಿಸಿದರು.
ವೈದ್ಯರು ದಯಾ ಶಕ್ತಿಯಿಂದ ಕಾರ್ಮಿಕ ವರ್ಗಕ್ಕೆ ಅನಾರೋಗ್ಯ ವಾಸಿ ಮಾಡಿ ಆರೋಗ್ಯ ಸೇವೆ ಒದಗಿಸುವ ಮೂಲಕ ಕಾರ್ಮಿಕರಕಣ್ಣಿರು ಒರೆಸುವ ಒಳ್ಳೆಯ ಸೇವಾ ಕೆಲಸ ಆಗಬೇಕು ಎಂದು ಹೇಳಿದರು.
ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು ಅವರು ಮಾತನಾಡಿ, ದೂರದ ರಾಜ್ಯಗಳು, ಜಿಲ್ಲೆಗಳಿಂದ ವಲಸೆ ಕಾರ್ಮಿಕರಿಗಂತು ಸಹಕಾರಿಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ವರ್ಚುವಲ್ ಮೂಲಕ ಬಳ್ಳಾರಿಯಲ್ಲಿ ನಿರ್ಮಾಣಗೊಳ್ಳಲಿರುವ ೧೦೦ ಹಾಸಿಗೆಗಳ ಇ.ಎಸ್.ಐ.ಸಿ ಆಸ್ಪತ್ರೆಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಇ.ಎಸ್.ಐ.ಸಿ. ಯೋಜನೆಯಡಿ ಅವಲಂಬಿತ ಭತ್ಯೆ, ಶಾಶ್ವತ ಅಂಗವೈಕಲ್ಯ ಭತ್ಯೆ, ಮಾತೃತ್ವ ಭತ್ಯೆಯ ಫಲಾನುಭವಿಗಳಿಗೆ ನಗದು ಸೌಲಭ್ಯದ ಚೆಕ್ ಗಳನ್ನು ವಿತರಿಸಲಾಯಿತು.
ವೈದ್ಯಕೀಯ ಆಯುಕ್ತರಾದ ಡಾ.ಆರ್ ಶ್ರೀನಿವಾಸ್, ಬಾಶೇಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರೇಮ ಕುಮಾರ್, ಇಎಸ್‌ಐಸಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು, ಮುಂತಾದವರು ಉಪಸ್ಥಿತರಿದ್ದರು.


























